ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಯಾಗಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚಿನ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. 
ಜಿಲ್ಲೆ

ಚುನಾವಣೆಗೆ ಸಚಿನ್ ನಾಮಪತ್ರ ಸಲ್ಲಿಕೆ

ನಾಗೇಶ ಎಸ್

ನಾಗಮಂಗಲ: ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಗಳಿಗೆ ಏ.13ರಂದು ನಡೆಯುವ ಚುನಾವಣೆಗೆ ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಿಂದ ನಾನು ತಾಲೂಕಿನಲ್ಲಿ ತಂದೆಯ ಪರ ಪ್ರವಾಸ ಕೈಗೊಂಡು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಸೆಯಂತೆ ಸಹಕಾರ ಸಂಘದ ಚುನಾವಣೆಗೆ ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ. ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಾಲಗಾರರಲ್ಲದ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿ ಹೆಚ್ಚು ಮತಗಳನ್ನು ಕೊಟ್ಟು ಈ ಚುನಾವಣೆಯಲ್ಲಿ ಗೆಲುವು ತಂದುಕೊಡಬೇಕೆಂದು ಮನವಿ ಮಾಡಿದರು.

ಮಾಜಿ ಎಂಎಲ್‌ಸಿ ಮತ್ತು ಮನ್‌ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ ಮಾತನಾಡಿದರು. ಸಚಿವರ ಸಹೋದರ ಎನ್.ಲಕ್ಷ್ಮೀಕಾಂತ್, ಸಚ್ಚಿನ್ ಪತ್ನಿ ಆಕಾಂಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಸುನಿಲ್ ಲಕ್ಷೀಕಾಂತ್, ಕೊಣನೂರು ಆನಂದ್, ಹನುಮಂತಯ್ಯ, ಡಿ.ಕೃಷ್ಣೇಗೌಡ, ತ್ಯಾಪೇನಹಳ್ಳಿ ಶ್ರೀನಿವಾಸ್, ಬಿ.ಎಂ.ಪ್ರಕಾಶ್, ಆರ್.ಕೃಷ್ಣೇಗೌಡ ಇದ್ದರು.