ಜಿಲ್ಲೆ

ರಸಗೊಬ್ಬರ ಕೊಡಲು ಯೋಗ್ಯತೆ ಇಲ್ಲದ ಸರ್ಕಾರ: ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಟೀಕೆ

ಮಂಡ್ಯ: ರಾಜ್ಯದಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಿ ಹಲವು ದಿನಗಳೇ ಕಳೆದಿವೆ. ಆದರೂ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಟೀಕಿಸಿದ್ದಾರೆ.

ಅಧಿಕಾರಕ್ಕೆ ಬಂದಾಗಿನಿಂದಲೂ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಇದೀಗ ಮತ್ತೊಮ್ಮೆ ರೈತರನ್ನು ಶೋಷಣೆ ಮಾಡುವ ಕೆಲಸಕ್ಕೆ ಮುಂದಾಗಿದೆ. ರೈತರ ಮಕ್ಕಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಿದರು. ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದರು. ಕೃಷಿ ಪಂಪ್‌ಸೆಟ್‌ಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದನ್ನು ಲಕ್ಷಾಂತರ ರೂಗಳನ್ನು ರೈತರೇ ಕೊಡುವಂತೆ ಮಾಡಿರುವುದೇ ರಾಜ್ಯ ಸರ್ಕಾರದ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡಿದ್ದ ರಸಗೊಬ್ಬರವನ್ನು ರಾಜ್ಯಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡಿದೆ. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈ ವರ್ಷ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದ್ದು, ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೀಗ ರಸಗೊಬ್ಬರ ಪೂರೈಕೆ ಮಾಡಲಾಗದ ಪರಿಣಾಮ ಅನ್ನದಾತರು ಆತಂಕದಲ್ಲಿದ್ದಾರೆ. ಇಷ್ಟಾದರೂ ಸಾಧನಾ ಸಮಾವೇಶ ಮಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ದುರಂತ. ಮಾತ್ರವಲ್ಲದೆ ಮುಂದಿನ ದಿನದಲ್ಲಿ ಇದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಕೂಡಲೇ ರೈತರಿಗೆ ರಸಗೊಬ್ಬರ ಪೂರೈಕೆ ಮಾಡದಿದ್ದರೆ ಬಿಜೆಪಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.