ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಮಹದೇವಪುರ, ಚಂದಗಾಲು ಹಾಗೂ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ದೇವಾಲಯ, ಸರ್ಕಾರಿ ಶಾಲೆ ವಕ್ಫ್ ಬೋರ್ಡ್‌ಗೆ ಖಾತೆಯಾಗಿದ್ದ ಬೆನ್ನಲ್ಲೇ ಇದೀಗ ಕೊತ್ತತ್ತಿ ಗ್ರಾಮದಲ್ಲಿಯೂ ರೈತನ ಕೃಷಿ ಭೂಮಿಯನ್ನು ಲಪಟಾಯಿಸಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಟೀಕಿಸಿದರು.
ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ರೈತರಿಗೆ ಯಾವುದೇ ತೊಂದರೆಯಾದರೆ ಸಂಬಂಧಿಸಿದ ರೈತರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾಡ್ ಕೋರ್ಟ್ ಅಥವಾ ಸಾಮಾನ್ಯ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿ ಸಮಸ್ಯೆಯಾದರೆ ವಕ್ಫ್ ಪ್ರಾಧಿಕಾರಕ್ಕೆ ಹೋಗಬೇಕು. ಇದು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನಾಗಿದೆ. ರೈತರಿಗೆ ಆಗಿರುವ ಅನ್ಯಾಯ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ತಕ್ಷಣವೇ ಈ ಕಾಯ್ದೆ ರದ್ದಾಗಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಈ ಅನ್ಯಾಯದ ಕಾನೂನು ಜಾರಿಗೆ ಬಂದಿದೆ. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರೇ ಈಗಲೂ ಅಧಿಕಾರದಲ್ಲಿದ್ದಾರೆ. ನಾವು ಶಾಲು, ಹಾರ ಹಾಕಿದರೆ ನಿರಾಕರಿಸುತ್ತಾರೆ. ಇಲ್ಲವೇ ಕಿತ್ತು ಎಸೆಯುತ್ತಾರೆ. ಆದರೆ ಮುಸಲ್ಮಾನರು ಟೋಪಿ, ಶಾಲು ಹಾಕಿಸಿದರೆ ಹಾಕಿಸಿಕೊಳ್ಳುತ್ತಾರೆ. ಈ ಮೂಲಕ ತಾವು ಒಂದು ಕೋಮುವಿನ ಪರ ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಸ್ಲಿಮರ ಓಲೈಕೆಗಾಗಿ ಹಿಂದುಗಳು ಹಾಗೂ ರೈತರ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಲಾಗುವುದಿಲ್ಲ. ರೈತರಿಗೆ ಅನ್ಯಾಯ ಮಾಡಿ ಮುಸ್ಲಿಮರನ್ನು ಹೋಲಿಕೆ ಮಾಡುವುದು ಒಳ್ಳೆಯದಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಪದೇ ಪದೇ ತಾನು ಹಿಂದು ಮತ್ತು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ ಸೇರಿದಂತೆ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿತು. ಈಗ ವಕ್ಫ್ ಬೋರ್ಡ್ ಮೂಲಕ ರೈತ ಸಮುದಾಯವನ್ನೇ ನಿರ್ನಾಮ ಮಾಡಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಈ ನಿಟ್ಟಿನಲ್ಲಿ ವಕ್ಫ್ ಬೋರ್ಡ್‌ಗೆ ಕುಮ್ಮಕ್ಕು ಕೊಡಲಾಗುತ್ತಿದೆ. ಇನ್ನು ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರೈತರಿಗೆ ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ, ಶಾಸಕ ರಮೇಶ ಬಂಡಿಸಿದ್ದೇಗೌಡ ಗಮನಹರಿಸುತ್ತಿಲ್ಲ. ಅವರು ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.