ಹುಕ್ಕೇರಿ: ರಾಜಕಾರಣಿಗಳಂತೆ ಸರ್ಕಾರಿ ಅಧಿಕಾರಿಗಳು ಸುಳ್ಳು ಹೇಳಿದರೆ ಜನರ ಸಮಸ್ಯೆ ಪರಿಹರಿಸುವವರು ಯಾರು ಎಂದು ತಾಲೂಕು ಶಾಸಕ ಉಮೇಶ ಕತ್ತಿ ಖಾರವಾಗಿ ಪ್ರಶ್ನಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಂಚಾಯಿತಿ ನೋಡಲ್ ಅಧಿಕಾರಿಗಳು ಮತ್ತು ಪಿಡಿಒಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಿಂಗಳಿಗೊಮ್ಮೆ ಸಭೆ ನಡೆಸಿ ಜನರ ಸಮಸ್ಯೆ ಪರಿಹರಿಸಲು ಆದೇಶಿಸುತ್ತೇವೆ. ಮರಳಿ ಮತ್ತೊಮ್ಮೆ ಸಭೆ ಕರೆದಾಗ ಸಮಸ್ಯೆ ಪರಿಹರಿಸಿದ್ದರ ಬಗ್ಗೆ ಕೇಳಿದರೆ ಇಲ್ಲದ ಸಬೂಬು ಹೇಳುವುದು ಅಥವಾ ಮುಂದಿನ ಸಭೆಯೊಳಗಾಗಿ ಪರಿಹರಿಸುವುದಾಗಿ ರಾಜಕಾರಣಿಗಳಂತೆ ಆಶ್ವಾಸನೆ ನೀಡುತ್ತೀರಿ. ಕಳೆದ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಈಗ ಸಭೆಯಲ್ಲಿ ಆ ವಿಷಯದ ಕುರಿತು ಪ್ರಶ್ನಿಸಿದರೆ ಇಲ್ಲದ ಕತೆ ಹೇಳುತ್ತಿರುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಜನಪ್ರತಿನಿಧಿಗಳು ಬಂದಾಗ ಜನರ ಮರ್ಜಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದೀಗ ಪಂಚಾಯಿತಿಗಳಿಗೆ ಉಸ್ತುವಾರಿಗಳ ನೇಮಕವಾಗಿರುವಾಗ ಅಂತಹ ಪರಿಸ್ಥಿತಿ ಇಲ್ಲ ಎಂದರು. ಅದಕ್ಕಾಗಿ ತಿಂಗಳ ಅಂತ್ಯದೊಳಗಾಗಿ ಪಂಚಾಯಿತಿಯಲ್ಲಿ ಬಾಕಿ ಇರುವ ತೆರಿಗೆ ವಸೂಲಿ ಮಾಡಲೇಬೇಕು. ಜತೆಗೆ ಆವರ್ತ ನಿಧಿ ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಸೂಚಿಸಿದರು.
ನರೇಗಾ ಯೋಜನೆಯಡಿ ತೋಟಪಟ್ಟಿ ನಿವಾಸಿಗಳಿಗೆ ಹಾಗೂ ಸ್ಮಶಾನಗಳಿಗೆ ತೆರಳಲು ಜನರಿಗೆ ಸಮರ್ಪಕ ರಸ್ತೆ ನಿರ್ಮಾಣ, ಹಳ್ಳಕೊಳ್ಳ, ಕೆರೆ-ಕಟ್ಟೆ ಮತ್ತು ಸರಕಾರಿ ನಿವೇಶನ, ಗಾಯರಾಣ, ಗಾಂವಠಾಣಾ ಅತಿಕ್ರಮಿಸಿಕೊಂಡಿದ್ದರೆ ತಕ್ಷಣ ಸರ್ವೇ ಮಾಡಿ ತೆರವುಗೊಳಿಸಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ಅಶೋಕ ಗುರಾಣಿ, ಇಒ ಬಿ.ಕೆ.ಲಾಳಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಮತ್ತು ತಾಲೂಕು ಅಧಿಕಾರಿಗಳು, ಪಿಡಿಒಗಳು ಇದ್ದರು. ಶ್ರೀಶೈಲ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ತಾಪಂ ಮ್ಯಾನೇಜರ್ ಆರ್.ಎ.ಚಟ್ನಿ ವಂದಿಸಿದರು.