ತುಮಕೂರು : ಸಮಾಜದ ತಳಸ್ತರದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕೆಂಬುದು ಪ್ರಧಾನಿ ನರೇಂದ್ರಮೋದಿ ಕನಸಾಗಿದ್ದು ಅದಕ್ಕೆ ಪೂರಕವಾಗಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಹೇಳಿದರು.
ನಗರದ ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ 2ನೇ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಒಟ್ಟಾರೆ ಜನಸಂಖ್ಯೆಯ ಶೇ.52 ಇರುವ ಹಿಂದುಳಿದ ವರ್ಗದ ಜನರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸದೃಢರನ್ನಾಗಿಸುವ ಗುರುತರ ಜವಾಬ್ದಾರಿ ಬಿಜೆಪಿ ಒಬಿಸಿ ಮೋರ್ಚಾ ಮುಖಂಡರು, ಕಾರ್ಯಕರ್ತರ ಮೇಲಿದೆ ಎಂದರು.
3.75 ಕೋಟಿ ಜನ: ರಾಜ್ಯದಲ್ಲಿ 199 ಜಾತಿಗಳನ್ನು ಒಳಗೊಂಡ ಸುಮಾರು 3.75 ಕೋಟಿ ಹಿಂದುಳಿದ ವರ್ಗದ ಜನರಿದ್ದಾರೆ. ಅವರ ಹಕ್ಕುಗಳಿಗಾಗಿ ನಾವೆಲ್ಲರೂ ಹೋರಾಡಬೇಕಾಗಿದೆ. ಕೇವಲ ಸಭೆ, ಸಮಾರಂಭಗಳಿಗೆ ಸೀಮಿತವಾಗದೆ, ಅವರಲ್ಲಿ ಜಾಗೃತಿ ಮೂಡಿಸಿ, ಶೋಷಣೆಮುಕ್ತ ವರ್ಗವನ್ನು ಸೃಷ್ಟಿಸಬೇಕಾಗಿದೆ ಎಂದು ನರೇಂದ್ರಬಾಬು ಹೇಳಿದರು.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಹಿಂದುಳಿದ ವರ್ಗದ 28 ಜನರಿಗೆ ಸಚಿವ ಸ್ಥಾನ, ಇಬ್ಬರಿಗೆ ರಾಜ್ಯಪಾಲರ ಹುದ್ದೆ ನೀಡಲಾಗಿದೆ. ಅಲ್ಲದೆ, ನೀಟ್ ಹಾಗೂ ಸಿಇಟಿಯಲ್ಲಿ ಶೇ.27 ಮೀಸಲಾತಿ ಘೋಷಿಸಿದ್ದಾರೆ. ಹಾಗಾಗಿ, ನಮ್ಮ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಹೆಚ್ಚಿನ ಅವಕಾಶ ದೊರೆತಿದೆ ಎಂದರು.
ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಈಡೇರಿಸುತ್ತಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷ ವಾಕ್ಯದ ಮೂಲಕ ಇಡೀ ದೇಶದ ಎಲ್ಲ ವರ್ಗದ ಜನರಿಗೂ ಯೋಜನೆಗಳನ್ನು ನೀಡುತ್ತಿದ್ದಾರೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರುದ್ರೇಶ್, ಮೋರ್ಚಾದಿಂದ 3 ತಿಂಗಳಿಗೊಮ್ಮೆ ಈ ಹಿಂದಿನ ಕಾರ್ಯಕ್ರಮಗಳ ಮೆಲುಕು ಮತ್ತು ಮುಂದಿನ 3 ತಿಂಗಳ ಕಾರ್ಯಕ್ರಮಗಳ ಮಾರ್ಗದರ್ಶನ ಕುರಿತಂತೆ ಕಾರ್ಯಕಾರಿಣಿ ಸಭೆ ನಡೆಯುಲಿದೆ. ನಮ್ಮ ಹಿಂದೆ ಬಿಜೆಪಿ ಎಂಬ ರಾಷ್ಟ್ರದ ಅತಿ ದೊಡ್ಡ ಪಕ್ಷದ ಶಕ್ತಿ ಇದೆ. ಹಾಗಾಗಿ ಹಿಂಜರಿಕೆ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗೋಣ. ಮುಂಬರುವ ದಿನಗಳಲ್ಲಿ ಸುಮಾರು 10 ಸಾವಿರ ಹಿಂದುಳಿದ ವರ್ಗದ ಜನರನ್ನು ಸೇರಿಸಿ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶಬಾಬು, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಜಿಲ್ಲಾ ಮುಖಂಡರಾದ ಗೋಕುಲ ಮಂಜುನಾಥ್, ಬನಶಂಕರಿಬಾಬು ಇದ್ದರು.
ಸ್ವಾತಂತ್ರೃ ಹೋರಾಟದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿಲ್ಲ. ಆದರೆ, ನಮಗೆ ಸಿಕ್ಕಿರುವ ಸ್ವಾತಂತ್ರೃ ಉಳಿಸಿಕೊಳ್ಳಲು ಹೋರಾಡಬೇಕಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರನ್ನು ಸದೃಢರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೆ.ಲ.ನರೇಂದ್ರಬಾಬು ರಾಜ್ಯಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ ಬಿಜೆಪಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ. ಸ್ವಾರ್ಥರಹಿತ ಸೇವೆಗೆ ಎಂದೆಂದಿಗೂ ಬೆಲೆ ಸಿಗಲಿದೆ. ಮುಂಬರುವ ಜಿಪಂ, ತಾಪಂ ಹಾಗೂ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಒಬಿಸಿ ಮೋರ್ಚಾ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ