ಜಿಲ್ಲೆ

ಗದ್ದಲದಲ್ಲೇ ಮುಕ್ತಾಯಗೊಂಡ ಸಾಮಾನ್ಯ ಸಭೆ ; ಬಿಡದಿ ಪುರಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ

ರೇಷ್ಮೆ ನಗರ ಡೆಸ್ಕ್

ಬಿಡದಿ: ಮೂರು ವರ್ಷಗಳ ನಂತರ ಪುರಸಭೆಯಲ್ಲಿ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜನೆಯಾಗಿದ್ದ ಸಾಮಾನ್ಯ ಸಭೆಯಲ್ಲಿ ಹಲವು ಚರ್ಚೆಗಳ ನಡುವೆ ಗಲಾಟೆ ಗದ್ದಲಯೊಂದಿಗೆ ಮುಕ್ತಾಯವಾಯಿತು.

ಸಭೆಯಲ್ಲಿ 43 ವಿಷಯಗಳ ಮೇಲೆ ಸರ್ವ ಸದಸ್ಯರ ಮುಂದೆ ಚರ್ಚೆಗಳು ನಡೆದವು. ಸಭೆ ಪ್ರಾರಂಭದಲ್ಲಿ ಆಡಳಿತ ಪಕ್ಷದ ದೇವರಾಜು, ಜನರಿಂದ ಆಯ್ಕೆಯಾಗಿ ಮೂರು ವರ್ಷಗಳ ನಂತರ ಸಭೆ ನಡೆಸುವ ಅಧಿಕಾರ ಸಿಕ್ಕಿದೆ. ಹಾಗಾಗಿ 3 ವರ್ಷಗಳಲ್ಲಿನ ಖರ್ಚು ವೆಚ್ಚ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳನ್ನು ಕೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೈ ಸದಸ್ಯ ಉಮೇಶ್, ಸಭೆಯಲ್ಲಿ ಏನು ಅಜೆಂಡಾ ಇಟ್ಟಿದ್ದಿರಿ, ಆ ವಿಷಯಗಳ ಬಗ್ಗೆ ಮಾತ್ರ ಚರ್ಚೆ ಮಾಡಿ ಎಂದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಯಿತು. ಮಧ್ಯೆ ಪ್ರವೇಶಿಸಿದ ಶಾಸಕರು, ನಿಮಗೆ ಯಾವ ವರ್ಷದ ಖರ್ಚುಗಳ ಲೆಕ್ಕ ಬೇಕೋ ಅದನ್ನು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗೆ ಪತ್ರ ಬರೆದು ಪಡೆದುಕೊಳ್ಳಿ ಎಂದು ಇಬ್ಬರು ಸದಸ್ಯರನ್ನೂ ಸಮಾಧಾನ ಮಾಡಿದರು.

ಪೆನ್ ಡ್ರೈವ್‌ನಲ್ಲಿ ಮಾಹಿತಿ ಕೊಡುತ್ತಾರೆ:

ಸಭಾ ನಡವಳಿಕೆ ಕೊಡಿ ಎಂದು ಮುಖ್ಯಾಧಿಕಾರಿಗೆ ಕೇಳಿ ತಿಂಗಳಾದರೂ ಮಾಹಿತಿ ಕೊಟ್ಟಿಲ್ಲ. ಪುರಸಭೆಯಲ್ಲಿ ಜೆರಾಕ್ಸ್ ಯಂತ್ರ ಕೆಟ್ಟಿದೆ. ಹಾಗಾಗಿ ಪೆನ್‌ಡ್ರೈವ್‌ನಲ್ಲಿ ಹಾಕಿ ಕೊಡುತ್ತೇವೆ ಎಂದು ಹೇಳುತ್ತಾರೆ ಎಂದು 21ನೇ ವಾರ್ಡಿನ ಭಾನುಪ್ರಿಯಾ ಆರೋಪಿಸಿದರು.

ಅವ್ಯಹಾರ ನಡೆದಿದ್ದರೆ ಅರ್ಜಿ ನೀಡಿ : ಈ ಹಿಂದೆ ಯಾವೆಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿದ್ದೀರಿ, ಅದರ ಬಗ್ಗೆ ಸಭೆಯ ಗಮನಕ್ಕೆ ತನ್ನಿ ಎಂದು ದೇವರಾಜು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಪುರಸಭೆಗೆ ಈ ಹಿಂದೆ ಎಸಿ ಆಡಳಿತಾಧಿಕಾರಿಯಾಗಿದ್ದರು. ಅವರ ಅಧ್ಯಕ್ಷತೆಯಲ್ಲಿ ಸಭೆಗಳು ನಡೆದು ಹಲವು ಯೋಜನೆಗಳನ್ನು ರೂಪಿಸಿ ಚಾಲನೆ ನೀಡಲಾಗಿದೆ. ಅವ್ಯವಹಾರದ ಬಗ್ಗೆ ತಿಳಿದು ಬಂದರೆ ಅರ್ಜಿ ಕೊಡಿ ಎಂದರು.

ರಸ್ತೆ ನಿರ್ಮಿಸಿಯೇ ಪಾರ್ಕ್ ಮಾಡಿ : ಅಮೃತ್ ಯೋಜನೆಯಡಿ ಉದ್ಯಾನವನ ಅಭಿವೃದ್ಧಿಗೆ ಮುಂದಾಗಲಾಗಿದ್ದು, ಸದ್ಯಕ್ಕೆ ಇದರ ಅವಶ್ಯಕತೆ ಇಲ್ಲ. ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿಗಳ ಸಮಸ್ಯೆ ಹೆಚ್ಚಾಗಿದೆ. ಒಂದು ವೇಳೆ ಪಾರ್ಕ್ ಅಭಿವೃದ್ಧಿ ಮಾಡಬೇಕಾದರೆ ಶಾಸಕರ ಅನುದಾನದಲ್ಲಿ ಮಾಡಲಿ ಎಂದು ದೇವರಾಜು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನನ್ನ ಅನುದಾನದಲ್ಲಿ ಪಾರ್ಕ್‌ಗೆ ಹಣ ತರಲು ಆಗುವುದಿಲ್ಲ. ಹಾಗಾಗಿ ಪಾರ್ಕ್‌ಗಳಿಗೆ ನಿಗದಿಯಾಗಿರುವ ಹಣ ಅದಕ್ಕೆ ಇರಲಿ. ರಸ್ತೆಗಳ ಹಾಗೂ ಚರಂಡಿಗಳ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಹಾಕೋಣ ಎಂದರು.

ಯುಜಿಡಿ ಕಾಮಗಾರಿ : ಪುರಸಭೆಯ 23 ವಾರ್ಡ್‌ಗಳಲ್ಲಿ ಬಹಳ ವರ್ಷಗಳ ಹಿಂದೆಯೇ ಯುಜಿಡಿ ಕಾಮಗಾರಿ ಪ್ರಾರಂಭವಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಅನೇಕ ಸದಸ್ಯರು ದೂರಿದರು. ಕೆಲಸ ಮಾಡಲು ಬರುವಾಗ ವಾರ್ಡ್ ಸದಸ್ಯರ ಗಮನಕ್ಕೆ ತರುವುದಿಲ್ಲ. ಏಕಾಏಕಿ ಬಂದು ಗುಂಡಿ ಬಗೆದು ಗುಂಡಿ ಮುಚ್ಚದೆ ಹೋಗುತ್ತಿದ್ದಾರೆ ಎಂದು ಲೋಹಿತ್ ಅಧಿಕಾರಿಗಳ ಮೇಲೆ ಮುಗಿಬಿದ್ದರು. ಈ ವೇಳೆ ಶಾಸಕರು, ಅಧಿಕಾರಿ ಅಭಿಲಾಷ್ ಅವರನ್ನು ಕರೆದು ವಾರಕ್ಕೊಮ್ಮೆ ಪುರಸಭೆಗೆ ಬಂದು ಸದಸ್ಯರ ಗಮನಕ್ಕೆ ತಂದು ಕಾಮಗಾರಿ ಮಾಡಿ ಎಂದು ತಾಕೀತು ಮಾಡಿದರು.

ವಿದ್ಯುತ್ ಚಿತಾಗಾರ ಅಗತ್ಯ

ಕೆಂಚನಕುಪ್ಪೆ ವಾರ್ಡ್‌ನಲ್ಲಿನ ಸ್ಮಶಾನ ವಿವರವಾಗಿ ಚರ್ಚೆಗೆ ಬಂದಾಗ ಶಾಸಕರು ಮಾತನಾಡಿ, ಪಟ್ಟಣಕ್ಕೆ ಒಂದು ವಿದ್ಯುತ್ ಚಿತಾಗಾರದ ಅವಶ್ಯಕತೆ ಇದೆ. ಪಟ್ಟಣ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಶೀಘ್ರ ನಿರ್ಮಿಸೋಣ ಎಂದರು.

ಕಸದ ಸಮಸ್ಯೆಗೆ ಮುಕ್ತಿ ನೀಡಿ

ಹಲವು ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ತಂದು ಹಾಕಲಾಗುತ್ತಿದೆ ಎಂದು ಸದಸ್ಯರು ಗಮನ ಸೆಳೆದರು. ಶಾಸಕರು ಹಾಗೂ ಪುರಸಭಾ ಅಧ್ಯಕ್ಷರು, ಪರಸರ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು. ನಿತ್ಯ ಫೀಲ್ಡ್ಗೆ ಹೋಗಿ ಕೆಲಸ ಮಾಡಿ. ಅಲ್ಲದೇ, ಬೈರಮಂಗಲ ಕ್ರಾಸ್ ಬಳಿ ಕೆ.ಪಿ.ಸಿ.ಎಲ್ ವತಿಯಿಂದ ಒಣಕಸದ ಎನರ್ಜಿ ಘಟಕವನ್ನು ಸ್ಥಾಪಿಸಲಾಗಿದ್ದು, ಅಲ್ಲಿಗೆ ಕಸ ಡಂಪ್ ಮಾಡಿ ಎಂದರು.

ಅಲ್ಲಿನ ಪಟ್ಟಣ ಕಸ ತೆಗೆದುಕೊಳ್ಳದ ಬಗ್ಗೆ ಮಾಹಿತಿ ತಿಳಿದ ಶಾಸಕರು, ನಮ್ಮ ಜಾಗದಲ್ಲಿ ಘಟಕ ಮಾಡಿ ನಮ್ಮ ಕಸವನ್ನೆ ತೆಗೆದುಕೊಳ್ಳುವುದಿಲ್ಲ ಎಂದರೆ ಹೇಗೆ? ನಿಮ್ಮ ಉನ್ನತ ಅಧಿಕಾರಿಗಳ ಜತೆಗೆ ಮಾತನಾಡಿ, ಒಣ ಕಸವನ್ನು ತೆಗೆದುಕೊಳ್ಳಿ, ಇಲ್ಲವಾದಲ್ಲಿ ಘಟಕಕ್ಕೆ ಬೀಗ ಹಾಕಿಸುತ್ತೇನೆ ಎಂದು ಸಭೆಯಲ್ಲಿದ್ದ ಅಧಿಕಾರಿಗೆ ಎಚ್ಚರಿಸಿದರು.