ಜಿಲ್ಲೆ

ಉದ್ಯಾನಗಳ ಸರ್ವೇ ಮಾಡಿ, ರಕ್ಷಿಸಿ ; ನಗರಸಭೆ, ಟೂಡಾ ಆಯುಕ್ತರಿಗೆ ಸಂಸದ ಜಿ.ಎಸ್. ಬಸವರಾಜು ಸೂಚನೆ

Tumakuru

ತುಮಕೂರು : ನಗರದಲ್ಲಿರುವ ಉದ್ಯಾನಗಳ ಸರ್ವೇ ನಡೆಸಿ, ಬೇಲಿ ಹಾಕಿ ಭದ್ರತಪಡಿಸುವಂತೆ ನಗರಪಾಲಿಕೆ ಮತ್ತು ಟೂಡಾ ಆಯುಕ್ತರಿಗೆ ಸಂಸದ ಜಿ.ಎಸ್. ಬಸವರಾಜು ತಾಕೀತು ಮಾಡಿದರು. ನಗರದ ಟೌನ್‌ಹಾಲ್‌ನಲ್ಲಿ ಶುಕ್ರವಾರ ‘ಜನತಾ ಜೀವ ವೈವಿಧ್ಯ ದಾಖಲಾತಿ’ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಕೆಲವು ಅಧಿಕಾರಿಗಳು ಪಾರ್ಕ್‌ಗಳನ್ನೇ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಈಗಿರುವ ಪಾರ್ಕ್‌ಗಳನ್ನಾದರೂ ಉಳಿಸಬೇಕಿದೆ ಎಂದರು.

ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ನಗರದಲ್ಲಿ 521 ಪಾರ್ಕ್‌ಗಳಿವೆ. ಈ ಪೈಕಿ 370 ಉದ್ಯಾನಗಳನ್ನು ಈಗಾಗಲೇ ಗುರುತಿಸಿ, ಹದ್ದುಬಸ್ತು ಮಾಡಿಸಿ, ಜಿಪಿಎಸ್‌ಗೆ ಅಳವಡಿಸಲಾಗಿದೆ. ಉಳಿದವುಗಳ ಒತ್ತುವರಿ ತೆರೆವು, ಗಡಿ ಗುರುತಿಸುವ ಕಾರ್ಯ ಚಾಲನೆಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಕೆಲ ದಿನಗಳಿಂದ ಸರ್ವೇಯರ್‌ಗಳ ಮುಷ್ಕರ ಕೈಗೊಂಡಿರುವ ಕಾರಣ ಸರ್ವೇ ಕಾರ್ಯಕ್ಕೆ ಹಿನ್ನಡೆಯಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಎಲ್ಲ ಪಾರ್ಕ್‌ಗಳನ್ನು ವಶಕ್ಕೆ ಪಡೆದು, ೆನ್ಸಿಂಗ್ ಮಾಡಿಸಲಾಗುವುದು ಎಂದರು.

ಪಾರ್ಕ್ ಒತ್ತುವರಿ ಸೇರಿ ಇನ್ನಿತರ ವಿಚಾರಗಳಿಗಾಗಿ 330 ಜಾಗಗಳ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ 125 ಜಾಗಗಳ ಬಗ್ಗೆ ರಾಜ್ಯ ಹೈಕೋರ್ಟ್‌ನಲ್ಲಿ, 80 ಜಾಗಗಳ ಬಗ್ಗೆ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆಯುತ್ತಿದೆ ಎಂದು ವಿವರಿಸಿದರು.

150ಕ್ಕೂ ಹೆಚ್ಚು ಪ್ರಕರಣಗಳು ಖುಲ್ಲಾ ಆಗಿವೆ. ಈ ಬಗ್ಗೆ ಚರ್ಚಿಸಲು ಮಂಗಳವಾರ (ಮಾ.22) ಪಾಲಿಕೆಯ ವಕೀಲರ ಜತೆ ವಿಶೇಷ ಸಭೆ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದರು. ಟೂಡಾ ಅಧ್ಯಕ್ಷ ಬಿ.ಎಸ್. ನಾಗಣ್ಣ, ಪಾಲಿಕೆ ಸದಸ್ಯೆ ಗಿರಿಜಾ, ಪಾಲಿಕೆಯ ವೈದ್ಯಾಧಿಕಾರಿ ಡಾ. ರಕ್ಷಿತ್, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮತ್ತಿತರರು ಇದ್ದರು.

ನಗರದಲ್ಲಿ ರಾಜಕಾಲುವೆ, ಪಾರ್ಕ್ ಒತ್ತುವರಿ ತೆರೆವಿಗೆ ಸಂಬಂಧಿಸಿದಂತೆ ಇನ್ನೂ 25 ಕಿಮೀ ಮಾತ್ರ ಸರ್ವೇ ಬಾಕಿ ಇದೆ. ಉಳಿದವುಗಳನ್ನು ಈಗಾಗಲೇ ಅಳತೆ ಮಾಡಿ, ತೆರವಿಗೆ ಆದೇಶ ನೀಡಲಾಗಿದೆ. ರೇಣುಕಾ, ಪಾಲಿಕೆ ಆಯುಕ್ತೆ ನಗರದಲ್ಲಿ ಮರಗಳನ್ನು ಕಡಿದು ಸಾಗಿಸಲೆಂದೆ ಕೆಲವರಿದ್ದಾರೆ. ಅಂಥವರ ಕೈಗೆ ಕೋಳ ತೊಡಿಸದಿದ್ದರೆ ಒಂದು ಮರಗಳನ್ನು ಉಳಿಯಲು ಬಿಡುವುದಿಲ್ಲ. ಒಂದು ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಪಡೆದು, ಅದನ್ನು ಆಧರಿಸಿ 20 ಮರ ಕಡಿಯುತ್ತಾರೆ. ಜಿ.ಎಸ್. ಬಸವರಾಜು, ಸಂಸದ