ಜಿಲ್ಲೆ

2 ದಿನಕ್ಕೊಮ್ಮೆ ಕುಡಿವ ನೀರು ಕೊಡಿ ; ತುರುವೇಕೆರೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

Tumakuru

ತುರುವೇಕೆರೆ ; ಪಟ್ಟಣದ ಜನತೆಗೆ ವಾರದಲ್ಲಿ 2 ದಿನಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವುದು... ಪಟ್ಟಣದ ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣವಾಗದಿರುವುದು...ಪಟ್ಟಣದಲ್ಲಿ ಮತ್ತೆ ಪ್ಲಾಸ್ಟಿಕ್ ಹಾವಳಿ.. ಸೇರಿ ಹಲವು ವಿಷಯಗಳು ಸೋಮವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಿದಾನಂದ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದವು.

ಬೇಸಿಗೆ ಆರಂಭವಾಗುತ್ತಿದ್ದು, ಪಟ್ಟಣದ ಜನತೆಗೆ ವಾರದಲ್ಲಿ 2 ದಿನಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿ ಹೇಮಾವತಿ ನೀರು ಹರಿದು ಮಲ್ಲಾಘಟ್ಟ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರೂ ಪಟ್ಟಣದಲ್ಲಿ 4 ದಿನಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇರೆ ತಾಲೂಕಿನಲ್ಲಿ 2 ದಿನಕ್ಕೆ ಒಮ್ಮೆ ನೀರು ಪೂರೈಸುತ್ತಿದ್ದಾರೆ. ಆದರೆ ಪಟ್ಟಣದಲ್ಲಿ ಸಾಧ್ಯವಾಗುತ್ತಿಲ್ಲ ಏಕೆ ಎಂದು ಸದಸ್ಯ ಎನ್.ಆರ್.ಸುರೇಶ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಚಿದಾನಂದ್, ಪಟ್ಟಣಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲ. ಮಲ್ಲಾಘಟ್ಟ ಕೆರೆಯಿಂದ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಬೇಸಿಗೆ ಪ್ರಾರಂಭವಾಗುತ್ತಿದ್ದು, ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕಾಗಿದ್ದು, ಸದ್ಯದಲ್ಲಿಯೇ ನೀರು ಪೂರೈಕೆಗೆ ನೌಕರರು ಹಾಗೂ ಸದಸ್ಯರ ಸಭೆ ಕೆರೆದು ಚರ್ಚಿಸಿ 2 ದಿನಕ್ಕೊಮ್ಮೆ ನೀರು ಬಿಡಲು ಪ್ರಯತ್ನ ಮಾಡೋಣ ಎಂದರು.

ಸದಸ್ಯ ಯಜಮಾನ್ ಮಹೇಶ್ ಮಾತನಾಡಿ, ಪಟ್ಟಣದ ವಾಣಿಜ್ಯ ಸಂಕೀರ್ಣ ಕಾಮಗಾರಿ ಮಾರ್ಚ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪಂಪಂ ಸುಪರ್ದಿಗೆ ನೀಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಏಕೆ ಎಂದು ಇಂಜಿನಿಯರ್ ಅವರನ್ನು ಪ್ರಶ್ನಿಸಿದರು.

ಇಂಜಿನಿಯರ್ ಸತ್ಯನಾರಾಯಣ್ ಪ್ರತಿಕ್ರಿಯಿಸಿ, ಗುತ್ತಿಗೆದಾರರು ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದು, ಮಾರ್ಚ್ ಅಂತ್ಯದೊಲಗೆ ಕಾಮಗಾರಿ ಮುಗಿಯಲಿದೆ. ನಂತರ ಪಟ್ಟಣ ಪಂಚಾಯಿತಿ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದರು.

ಪಟ್ಟಣ ಪಂಚಾಯಿತಿಯ ಆಸ್ತಿ ಬೇಡವೇ ? : ತಿಪಟೂರು ರಸ್ತೆಯ ಕೃಷ್ಣಾ ಟಾಕೀಸ್ ಬಳಿ ಪಟ್ಟಣ ಪಂಚಾಯಿತಿ ಜಾಗದಲ್ಲಿ ಅಕ್ರಮವಾಗಿ ಅಂಗಡಿ ನಿರ್ಮಿಸಿಕೊಂಡು ಕೆಲವರು ಬಾಡಿಗೆ ಪಡೆಯುತ್ತಿದ್ದಾರೆ. ಈ ಜಾಗವನ್ನು ಅಳತೆ ಮಾಡಿ ಪಪಂ ವಶಕ್ಕೆ ನೀಡಿ ಎಂದು ಅರ್ಜಿ ನೀಡಿ ವರ್ಷ ಕಳೆದಿದೆ. ಆದರೂ ಮುಖ್ಯಾಧಿಕಾರಿ ಗಮನಹರಿಸುತ್ತಿಲ್ಲ. ಪಟ್ಟಣ ಪಂಚಾಯಿತಿಯ ಆಸ್ತಿ ಬೇಡವೇ ಎಂದು ಸದಸ್ಯೆ ಆಶಾ ರಾಜಶೇಖರ್ ಪ್ರಶ್ನಿಸಿದರು. ಸರ್ವೇ ಇಲಾಖೆಗೆ ಕಳಿಸಿದ್ದು, ಸರ್ವೇ ಕಾರ್ಯ ಮಾಡಲಿದ್ದೇವೆ. ಸ.ನಂ.192ರಲ್ಲಿ ಶ್ರೀನಿವಾಸ್ ಎಂಬುವವರ ಜಮೀನಿದ್ದು, ಪಕ್ಕದಲ್ಲಿ ಪಪಂನ 24*46 ಅಳತೆಯ ಜಮೀನು ಇದೆ. ಅಳತೆ ಮಾಡಿ ಜಮೀನು ವಶಕ್ಕೆ ಪಡೆಯಲಾಗುವುದು ಎಂದು ಮುಖ್ಯಾಧಿಕಾರಿ ಮಂಜುಳಾದೇವಿ ಪ್ರತಿಕ್ರಿಯಿಸಿದರು. ಸದಸ್ಯರಾದ ಪ್ರಭಾಕರ್, ಅಂಜನ್ ಕುಮಾರ್, ಜಯಮ್ಮ, ನದೀಂ, ಮಧು, ರವಿ, ಸ್ವಪ್ನ ನಟೇಶ್, ಶೋಭಾ ಉಮೇಶ್, ಆನಂದ್, ಅಧಿಕಾರಿಗಳು ಇದ್ದರು.

ಮತ್ತೆ ಪ್ಲಾಸ್ಟಿಕ್ ಹಾವಳಿ : ಪಟ್ಟಣದಲ್ಲಿ ಮತ್ತೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದರೂ ಆರೋಗ್ಯಾಧಿಕಾರಿ ಕಂಡೂ ಕಾಣದಂತಿದ್ದಾರೆ. ಪಪಂ ಅಧಿಕಾರಿಗಳು ಇತ್ತೀಚೆಗೆ ಅಂಗಡಿಗಳಲ್ಲಿ ದಾಳಿ ಮಾಡಿ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ಅದೆಲ್ಲ ಎಲ್ಲಿದೆ ಎಂದು ನೂತನ ನಾಮಿನಿ ಸದಸ್ಯ ನವೀನ್ ಬಾಬು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ, ಪಟ್ಟಣದಲ್ಲಿ ಸಂಗ್ರಹಗೊಂಡ ಪ್ಲಾಸ್ಟಿಕ್ ಕವರ್‌ಗಳನ್ನು ಗೋಡನ್‌ನಲ್ಲಿ ತುಂಬಿದ್ದು, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಗೆ ಹಂತ ಹಂತವಾಗಿ ನೀಡಿದ್ದೇವೆ. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ, ಬಳಕೆ ಮಾಡುತ್ತಿರುವವರಿಗೂ ದಂಡ ಹಾಕಿ ಎಚ್ಚರಿಸಲಾಗಿದೆ ಎಂದರು.