ಜಿಲ್ಲೆ

ಅವಕಾಶಗಳು ಯಶಸ್ಸಿನ ಮೆಟ್ಟಿಲು : ಪುಷ್ಪಾ ಸುಭಾಷ್ ಅಭಿಪ್ರಾಯ

ಸೌಮ್ಯ ಆರ್

ಕಡಬ: ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆ ಅನಾವರಣಕ್ಕೆ ಅನೇಕ ವೇದಿಕೆಗಳು ಸಿಗುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿ ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶಗಳು ಯಶಸ್ಸಿಗೆ ಮೆಟ್ಟಿಲು ಎಂಬುದನ್ನು ಅರಿತು ಮುನ್ನಡೆಯಬೇಕು ಎಂದು ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಷ್ ಹೇಳಿದರು.

ಕಡಬ ತಾಲೂಕು ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮನೋಹರ್ ಸಬಳೂರು, ಅಧ್ಯಕ್ಷ ಗಣೇಶ್ ಎರ್ಮಡ್ಕ, ಹಿರಿಯರಾದ ಲಿಂಗಪ್ಪ ಗೌಡ ಕಡೆಂಬ್ಯಾಲು ಶುಭಹಾರೈಸಿದರು. ಕೊಲ ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ ಪಾನ್ಯಾಲು, ಶಶಿಕಲಾ ಏಣಿತ್ತಡ್ಕ, ಭಾರತಿ ಕಲ್ಕಾಡಿ ಉಪಸ್ಥಿತರಿದ್ದರು.

ಶಿಕ್ಷಕಿ ತಾರಾದೇವಿ ವರದಿ ಮಂಡಿಸಿದರು. ಶಾಲಾ ಮುಖ್ಯಗುರು ವಾರಿಜಾ ಬಿ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ವಂದಿಸಿದರು. ಶಿಕ್ಷಕರಾದ ಶೇಖರ ಬಲ್ಯ, ವೆಂಕಟೇಶ್, ರವಿಚಂದ್ರ, ಶಿಕ್ಷಕಿಯರಾದ ಅಂಜನಾ, ತೇಜಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿತರಣೆ

ಎನ್‌ಎನ್‌ಎಂಎಸ್ ಉತ್ತೀರ್ಣರಾದ ಫಾತಿಮತ್ ಅಸ್ಲಾಹ, ನವೋದಯ ಪರೀಕ್ಷೆ ಉತ್ತಿರ್ಣರಾದ ಆಯಿಶ್ ಏಣಿತ್ತಡ್ಕ, ಋತ್ವಿಜ್ ಕೊಲ್ಯ ಹಾಗೂ ಶಾಲೆ ಅಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳನ್ನು ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ನಡೆಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಾರ್ಷಿಕೋತ್ಸವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಊರಿನ ಹಬ್ಬವಾಗಿ ಮಾರ್ಪಾಡಾಗಬೇಕು. ಇದಕ್ಕಾಗಿ ಊರಿನ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವು ಪ್ರಯತ್ನಿಸಬೇಕು.

ಪುಷ್ಪಾ ಸುಬಾಷ್, ಕೊೈಲ ಗ್ರಾಪಂ ಅಧ್ಯಕ್ಷೆ