ಜಿಲ್ಲೆ

ಮಾರ್ಗರೆಟ್​ಆಳ್ವಗೆ ಸಾಹೇ ಗೌರವ ಡಾಕ್ಟರೇಟ್

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ನಗರದ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು ಎಚ್​.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಡಿ.14ರಂದು ಶನಿವಾರ ಬೆಳಗ್ಗೆ 10.30ಕ್ಕೆ ಸಾಹೇ(ಶ್ರೀಸಿದ್ಧಾರ್ಥ ಆಕಾಡೆಮಿ ಆಫ್​ ಹೈಯರ್​ ಎಜುಕೇಷನ್​) ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

13ನೇ ಸಾಹೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವೆ, ಮಾಜಿ ರಾಜ್ಯಪಾಲೆ ಮಾರ್ಗರೆಟ್​ಆಳ್ವ ಅವರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಲಾಗುತ್ತಿದೆ. ನವದೆಹಲಿಯ ಆಲ್​ ಇಂಡಿಯಾ ಕೌನ್ಸಿಲ್​ ಫಾರ್​ ಟೆಕ್ನಿಕಲ್​ ಎಜುಕೇಶನ್​ ಅಧ್ಯಕ್ಷ ಪ್ರೊ.ಟಿ.ಜಿ.ಸಿತಾರಾಮ್​ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಸಾಹೇ ವಿವಿ ಕುಲಾಧಿಪತಿಗಳು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಪದವಿ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆ ಭೋದಿಸಿ, ಪ್ರಮಾಣಪತ್ರ ವಿತರಿಸಲಿದ್ದಾರೆ ಎಂದರು.

ಕುಲಸಚಿವ ಡಾ.ಎಂ.ಝೆಡ್​ ಕುರಿಯನ್​ ಮಾತನಾಡಿ, ಸಾಹೇ ಬೆಳೆದು ಬಂದ ಹಾದಿ ಹಾಗೂ ನ್ಯಾಕ್​ ಎ+ ಪಡೆದಿರುವ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಸಾಹೇ ವಿವಿ ಅಂತಾರಾಷ್ಟ್ರೀಯ ರ್ಯಾಂಕ್​ ಪಟ್ಟಿಯಲ್ಲಿ ಬರುವ ಎಲ್ಲಾ ರೀತಿಯ ಪ್ರಯತ್ನಗಳು ನಡೆಸುತ್ತಿದೆ ಎಂದರು.

ಇತ್ತೀಚೆಗೆ ಅಮೆರಿಕಾದ ಅವಲಾನ್​ ವೈದ್ಯಕಿಯ ವಿವಿಯೊಂದಿಗೆ ಸಾಹೇ ವಿವಿ ಒಪ್ಪಂದ ನಡೆಸಿತ್ತು. ಅದರ ಒಪ್ಪಂದದ ಪ್ರಕಾರ ಮುಂದಿನ ಜನವರಿ ಮಾಹೆಯಲ್ಲಿ ವೈದ್ಯಕಿಯ ಆನ್​ಲೈನ್​ ತರಗತಿಗಳನ್ನು ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಅವಲಾನ್​ ವಿವಿಯ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಸಾಹೇ ವಿವಿಯಲ್ಲಿ ಆನ್​ಲೈನ್​ ಮೂಲಕ ಬೋಧನಾ ಮತ್ತು ಪ್ರಾಯೋಗಿಕ ತರಗತಿಗಳು ಪಡೆದುಕೊಳ್ಳುತ್ತಾರೆ ಎಂದು ಸಾಹೇ ವಿವಿಯ ಕುಲಾಧಿಪತಿ ಸಲಹೆಗಾರ ಡಾ.ವಿವೇಕ್​ ವೀರಯ್ಯ ತಿಳಿಸಿದರು.

ಎಸ್​ಎಸ್​ಐಟಿ ಪ್ರಾಚಾರ್ಯ ಡಾ.ಎಂ.ಎಸ್​. ರವಿಪ್ರಕಾಶ ಮಾತನಾಡಿ, ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡಲು ಶೇ.80ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ. ಅತೀ ಹೆಚ್ಚು ರ್ಯಾಂಕ್​ ಪಡೆದವರಲ್ಲಿ ಅವರೇ ಮೇಲುಗೈ. ಕಳೆದ ಎರಡು ವರ್ಷದ ಹಿಂದೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್​ ಕ್ಷೇತ್ರದಲ್ಲಿಯೂ ಶೇ.20ರಷ್ಟು ಮಾತ್ರ ಕ್ಯಾಂಪಸ್​ ಪ್ಲೇಸ್​ಮೆಂಟ್​ ಇತ್ತು. ಈ ಬಾರಿ ಕ್ಯಾಂಪಸ್​ ಉದ್ಯೋಗ ಅವಕಾಶ ಶೇ.60ರಷ್ಟು ಹೆಚ್ಚಾಗುವ ನಿರೀಕ್ಷೆ ಎಂದರು.

ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್​, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಸಾಣಿಕೊಪ್ಪ, ಡೆಂಟಲ್​ ಕಾಲೇಜು ಪ್ರಾಚಾರ್ಯ ಡಾ.ಬಿ.ಪ್ರವಿಣ್​ ಕುಡುವ, ವೈದ್ಯಕೀಯ ಕಾಲೇಜು ಉಪಪ್ರಾಚಾರ್ಯ ಡಾ.ಜಿ.ಎನ್​.ಪ್ರಭಾಕರ್​, ಉಪ ಕುಲಸಚಿವ ಡಾ.ಸುದೀಪ್​ ಕುಮಾರ್​ ಸುದ್ದಿಗೋಷ್ಠಿಯಲ್ಲಿ ಇದ್ದರು.

ಇಂಜಿನಿಯರಿಂಗ್​,ವೈದ್ಯಕೀಯ, ದಂತ ವೈದ್ಯಕೀಯ, ಪಿಎಚ್​.ಡಿ ಸೇರಿದಂತೆ ಒಟ್ಟು 876 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಮಾಡಲಾಗುವುದು.

ಇಂಜಿನಿಯರಿಂಗ್​- 6, ವೈದ್ಯಕೀಯ- 1, ದಂತ ವೈದ್ಯಕೀಯ -2, ಎಂಸಿಎ- ವಿಭಾಗದಲ್ಲಿ 1ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ.

ಡಾಕ್ಟರೇಟ್​ ಪದವಿ- 24, ಇಂಜಿನಿಯರಿಂಗ್​-60, ವೈದ್ಯಕೀಯ-147, ದಂತ ವೈದ್ಯಕೀಯ-49 ಸೇರಿದಂತೆ ರ್ಯಾಂಕ್​ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುತ್ತದೆ. ಅತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳು. ಇಂಜಿನಿಯರಿಂಗ್​- 1, ವೈದ್ಯಕಿಯ- 1 ಹಾಗೂ ದಂತ ವೈದ್ಯಕೀಯ- 1 ಪ್ರಶಸ್ತಿ ಪ್ರದಾನ ನಡೆಯಲಿದೆ.