ಜಿಲ್ಲೆ

ಭವಿಷ್ಯದ ಸಾಧನೆಗೆ ಪ್ರೇರಣೆ: ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಾಬಲೇಶ್ವರ ಎಂ.ಎಸ್

ಮಂಗಳೂರು: ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಶ್ರೇಷ್ಠ ಕಾರ್ಯ. ಇದರಿಂದ ಯುವ ಪ್ರತಿಭೆಗಳಿಗೆ ಭವಿಷ್ಯದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಪ್ರಶಸ್ತಿಗಳ ಹಿಂದೆ ಹೋಗದೆ ಅದು ನಮ್ಮನ್ನು ಹುಡುಕಿಕೊಂಡು ಬರುವಂತಾಗಬೇಕು ಎಂದು ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಹೇಳಿದರು.

ಉರ್ವಸ್ಟೋರ್‌ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಆಶ್ರಯದಲ್ಲಿ ‘ನಾಡು ನುಡಿ ಸಾಹಿತ್ಯ ಸಮ್ಮೇಳನ’ ಕಾವ್ಯ ದಶಾವತಾರ-ಕವಿ ಕಾವ್ಯ ಸನ್ಮಾನ, ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್, ಕಲ್ಕೂರ ಪ್ರತಿಷ್ಠಾನ ಮುಖ್ಯಸ್ಥ ಪ್ರದೀಪ್ ಕುಮಾರ್ ಕಲ್ಕೂರ, ಯುಗಪುರುಷದ ಕೆ.ಭುವನಾಭಿರಾಮ ಉಡುಪ, ದ.ಕ. ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಲತಾ ಕೃಷ್ಣದಾಸ್, ಕಾವ್ಯ ದಶಾವತಾರ ಸಂಯೋಜಕಿ ಗೀತಾ ಲಕ್ಷ್ಮೀಶ್, ಪಾರ್ವತಿ ಮಂಜುನಾಥ್ ಪಡೀಲ್, ರಾಜೇಶ್ವರಿ ಮಂಜುನಾಥ್, ಶೈಲಜಾ ಶ್ರೀನಿವಾಸ್, ರಜತ್ ಕೃಷ್ಣದಾಸ್ ಉಪಸ್ಥಿತರಿದ್ದರು.

ಕವಯಿತ್ರಿ, ರಂಗಕಲಾವಿದೆ ಪೂರ್ಣಿಮಾ ಸುರೇಶ್ ಉಡುಪಿ ಕಾವ್ಯ ದಶಾವತಾರ ಉತ್ತರಾರ್ಧದ ಅಧ್ಯಕ್ಷತೆ ವಹಿಸಿದ್ದರು. ಜೂನಿಯರ್ ರಾಜ್‌ಕುಮಾರ್ ಜಗದೀಶ್ ಶಿವಪುರ ದಶಾವತಾರ ಗೀತೆ ಪ್ರಸ್ತುತ ಪಡಿಸಿದರು. ಲಾಲಿತ್ಯಾ ಬೇಲೂರು ಅವರಿಂದ ಭರತನಾಟ್ಯ, ರಿಶಿಕಾ ಕುಂದೇಶ್ವರ್ ಅವರಿಂದ ಗಾನ ರಂಜನೆ ನಡೆಯಿತು. ಕೆ.ಎಲ್ ಪೋಟ್ರೇಟ್ಸ್‌ನ ಲಕ್ಷ್ಮೀನಾರಾಯಣ ಕಲಾಕುಂಚ ರಚನೆ ಮೂಲಕ ಗಮನ ಸೆಳೆದರು.

ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಕಾ.ವೀ ಕೃಷ್ಣದಾಸ್ ಪ್ರಸ್ತಾವಿಸಿದರು. ಆರ್‌ಜೆ ಪ್ರಸನ್ನ, ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

ಸಾಧನಾ ಪ್ರಶಸ್ತಿ ಪ್ರದಾನ:

ಹಿರಿಯ ಸಾಹಿತಿ ಎ.ಎನ್ ಪ್ರಸನ್ನ ಅವರಿಗೆ ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ ಹಾಗೂ ರಘು ಇಡ್ಕಿದು ಅವರಿಗೆ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಚಲನಚಿತ್ರ ನಟ ಎಸ್.ದೊಡ್ಡಣ್ಣ, ಸಾಹಿತಿ, ಸಂಘಟಕ ಎಂ.ಜಿ.ಅರಸ್, ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್., ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲ್, ಪತ್ರಕರ್ತರಾದ ಸಚ್ಚಿದಾನಂದ ಉಡುಪ, ನವನೀತ್ ಶೆಟ್ಟಿ ಕದ್ರಿ, ಪಿ.ಬಿ.ಹರೀಶ್ ರೈ, ಸಂಘಟಕ ಅರೆಹೊಳೆ ಸದಾಶಿವ ರಾವ್, ಸಾಮಾಜಿಕ ಸೇವೆಗಾಗಿ ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿ, ತುಳು ಭಾಷಾ ಹೋರಾಟಕ್ಕಾಗಿ ಜೈ ತುಲುನಾಡ್ ಸಂಸ್ಥೆಯನ್ನು ಸಾಧನಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಯಕಿ ವಿಭಾ ಶ್ರೀನಿವಾಸ್ ನಾಯಕ್ ಅವರಿಗೆ ಸಾಧನಾ ಯುವ ರಾಜ್ಯ ಪ್ರಶಸ್ತಿ, ಕ್ರೀಡಾ ವರದಿಗಾರ ಜಗದೀಶ್‌ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಸಾಧನಾ ವಿಶೇಷ ಪುರಸ್ಕಾರ, ಬಹುಮುಖ ಪ್ರತಿಭೆ ಲಾಲಿತ್ಯಾ ಬೇಲೂರು ಅವರಿಗೆ ಸಾಧನಾ ರಾಜ್ಯ ಬಾಲ ಪುರಸ್ಕಾರ ಪ್ರದಾನಿಸಲಾಯಿತು.