ಜಿಲ್ಲೆ

ಹಿಂದಿನವ್ರು ಅಧಿಕಾರ ಕಳ್ಕೊಂಡಿದ್ದು ಇದಕ್ಕೇನೆ... ಈಗ್ಲೂ ಹಾಗೇ ಆಗೋದು: ಸಚಿವ ನಿರಾಣಿ ಕಾಲೆಳೆದ ಯತ್ನಾಳ್

ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಅವರು‌ ವೀರಶೈವ ಲಿಂಗಾಯತ ಧರ್ಮ ಒಡೆಯಲು ಹೋಗಿ ಅಧಿಕಾರ ಕಳೆದುಕೊಂಡರು. ಈಗ ಸಚಿವ ಮುರುಗೇಶ್ ನಿರಾಣಿಯವರು ಪಂಚಮಸಾಲಿ ಮಠಗಳನ್ನು ವಿಭಜಿಸಿ ಮೂರನೇ ಮಠ ಮಾಡಲು ಹೊರಟಿದ್ದು, ಅವರಿಗೆ ರಾಜಕೀಯವಾಗಿ ಉಳಿಗಾಲವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದರು.

ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಧರ್ಮ ಹಾಗೂ ಮಠದೊಳಗೆ ರಾಜಕೀಯ ಪ್ರವೇಶ ಮಾಡಬಾರದು. ಅಂತಹವರು ರಾಜಕೀಯವಾಗಿ‌ ವಿನಾಶವಾಗುತ್ತಾರೆ. ಕೈಗಾರಿಕೆಗಳಿಗೆ ಭೂಸ್ವಾಧೀನದಲ್ಲಿ‌ ಭ್ರಷ್ಟಾಚಾರದ ಆರೋಪ ಮಾಡುವವರು ಅಂತಹ ದಾಖಲೆಗಳನ್ನು ಮುಖ್ಯಮಂತ್ರಿಗೆ ನೀಡಲಿ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳುವರು ಎಂದು ಉತ್ತರಿಸಿದರು.

ಅಸಮಾಧಾನವಿಲ್ಲ: ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ ಕೊಟ್ಟಿರುವುದಕ್ಕೆ ಯಾವೊಬ್ಬ ಸಚಿವರಿಗೆ ಅಸಮಾಧಾನವಿಲ್ಲ. ವಲಸಿಗರು ಪಕ್ಷಕ್ಕೆ ಕೈಕೊಡಲಿದ್ದಾರೆ ಎಂದು ಹೇಳಿದ ಬಳಿಕ ಒಬ್ಬೊಬ್ಬ‌ರೇ ವಲಸಿಗ ಸಚಿವರು ಸ್ಪಷ್ಟನೆ ನೀಡುತ್ತಿದ್ದು, ಇದರಿಂದಾಗಿ ಪಕ್ಷ ಇನ್ನಷ್ಟು ಗಟ್ಟಿಯಾಗಲಿದೆ. ಮುಖ್ಯಮಂತ್ರಿಯಾಗುವುದು ನನ್ನ ಹಣೆಬರೆಹದಲ್ಲಿದ್ದರೆ ಯಾರೂ ತಪ್ಪಿಸಲಿಕ್ಕಾಗದು‌ ಎಂದು ಯತ್ನಾಳ್ ಹೇಳಿದರು.