ಜಿಲ್ಲೆ

ರಾಜ್ಯಕ್ಕೆ ಶೀಘ್ರವೇ ಇನ್ನೊಂದು ಜಿಲ್ಲೆ- ಸಂಪುಟದಲ್ಲಿ ಸಿಕ್ತು ತಾತ್ವಿಕ ಅನುಮೋದನೆ

suchetana

ಬೆಂಗಳೂರು: ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎಂಬ ಬಹುದಿನಗಳ ಆಸೆಯನ್ನು ಸರ್ಕಾರ ಈಡೇರಿಸಿದೆ. ಇಂದು ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ಇದಕ್ಕೆ ತಾತ್ವಿಕ ಅನುಮೋದನೆ ದೊರೆತಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಹೊರಹೊಮ್ಮಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ಜಿಲ್ಲೆಯ ರಚನೆ ಸಂಬಂಧ ಅಗತ್ಯ ಇರುವ ಪ್ರಕ್ರಿಯೆಗಳ ಬಗ್ಗೆ ಮುಂದಿನ ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲೂ ನಿರ್ಧರಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಮಧುಸ್ವಾಮಿ, ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದ್ದು, ಮುಂದಿನ ಸಭೆಯಲ್ಲಿ ಅಧಿಕೃತ ಅನುಮೋದನೆ ಸಿಗಲಿದೆ. ಜಿಲ್ಲೆಯ ರಚನೆ ಸಂಬಂಧ ಪ್ರಕ್ರಿಯೆ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಬಹಳ ಜನರ ಬೇಡಿಕೆ ಇದಾಗಿತ್ತು. ಇಂದು ಆ ಮನವಿಯನ್ನು ಸ್ವೀಕಾರ ಮಾಡಿಕೊಂಡು ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ವಿಜಯನಗರ ಜಿಲ್ಲೆ ಆಗಲೇಬೇಕು ಎಂಬ ಒಂದೇ ತೀರ್ಮಾನಕ್ಕೆ ಬದ್ಧರಾಗಿ ಅನುಮೋದನೆ ತೆಗೆದುಕೊಂಡಿದ್ದಾರೆ. ತಾಂತ್ರಿಕವಾಗಿ ಯಾವ ರೀತಿ ಹಾಗೂ ಯಾವ ಯಾವ ತಾಲೂಕುಗಳನ್ನು ಸೇರಿಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಣೆಯಾಗಲಿದೆ ಎಂದರು.

ಪ್ರಸ್ತಾಪಿತ ವಿಜಯನಗರ ಜಿಲ್ಲೆಗೆ ಈಗ ಬಳ್ಳಾರಿಯಲ್ಲಿರುವ ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ, ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳು ಸೇರಲಿವೆ. ಹೊಸಪೇಟೆಯು ಜಿಲ್ಲಾ ಕೇಂದ್ರವಾಗಿರಲಿದೆ ಎನ್ನಲಾಗಿದೆ.