ಸಂತೋಷ್‌ ಕುಟುಂಬಸ್ಥರು 
ಜಿಲ್ಲೆ

ಟ್ಯೂಷನ್‌ಗೆ ಹೋಗಿದ್ದ ಕಲಬುರಗಿ ವಿದ್ಯಾರ್ಥಿ ಕಿಡ್ನಾಪ್‌: ಸೈಕಲ್‌ ಖರೀದಿಸಿದ್ದೇ ಕಾರಣವಾಯ್ತಾ?

ಕಲಬುರಗಿ: ಕಲಬುರಗಿಯಲ್ಲಿ ಪಿಯುಸಿ ವಿದ್ಯಾರ್ಥಿ ಕಿಡ್ನಾಪ್ ಮಾಡಿರುವ ಘಟನೆ ನಡೆದಿದೆ. ಪಿಯುಸಿ ವಿಜ್ಞಾನ ವಿದ್ಯಾರ್ಥಿ ಸಂತೋಷ್ ಚಹ್ವಾಣ್‌ನನ್ನು (17) ಅಪಹರಣ ಮಾಡಲಾಗಿದೆ. ಟ್ಯೂಶನ್ ಹೋಗುವಾಗ ಈತನನ್ನು ಅಪಹರಿಸಲಾಗಿದೆ.

ಮಾರ್ಚ್ 11 ರಂದು ಈ ಘಟನೆ ನಡೆದಿದೆ. ನಗರದ ಮಾತಾ ಮಾಣಿಕೇಶ್ವರಿ ನಗರದಿಂದ ರಾಜಾಪುರ ಬಡವಾಣೆಗೆ ಹೋಗುವಾಗ ಅಪಹರಿಸಲಾಗಿದ್ದು, ನಂತರ ಸಂತೋಷ್ ನಂಬರ್‌ನಿಂದ ಆತನ ಸಹೋದರನಿಗೆ ಕರೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನನ್ನನ್ನು ಏನೂ ಮಾಡಬೇಡಿ ಎಂದು ಸಂತೋಷ್‌ ಬೇಡಿಕೊಳ್ಳುತ್ತಿದ್ದ ಶಬ್ದ ಕೇಳಿದೆ. ಇದಾದ ಬಳಿಕ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.

ಕಾಲೇಜಿಗೆ ಹೋಗಲು ಸಂತೋಷ್‌ ಸ್ನೇಹಿತನ ಬಳಿ ಸೈಕಲ್ ಖರೀದಿಸಿದ್ದ. ಅದಕ್ಕಾಗಿ ಆತ ಮೂರು ಸಾವಿರ ರೂಪಾಯಿ ನೀಡಿದ್ದ. ಸಂತೋಷ್ ಸ್ನೇಹಿತ ಸೈಕಲ್ ಕದ್ದು ಅದನ್ನು ಸಂತೋಷ್‌ಗೆ ಮಾರಾಟ ಮಾಡಿದ್ದ. ಇದೇ ಸೈಕಲ್‌ನಲ್ಲಿ ಸಂತೋಷ್ ಕಾಲೇಜಿಗೆ ಹೋಗುತ್ತಿದ್ದ ಎನ್ನಲಾಗಿದೆ.


ಸೈಕಲ್‌ನ ಮೂಲ ವಾರಸುದಾರರು ಕಾಲೇಜಿಗೆ ಬಂದು ಸಂತೋಷ್ ಜೊತೆ ಗಲಾಟೆ ಮಾಡಿದ್ದರು. ಗಲಾಟೆ ನಂತರ ಸೈಕಲ್ ತೆಗೆದುಕೊಂಡ ಹೋಗಿದ್ದರು. ನಂತರ ಕಾಲೇಜಿನ ಪ್ರಾಂಶುಪಾಲರೇ ಸಂತೋಷ್‌ನನ್ನು ಮನೆಗೆ ಬಿಟ್ಟಿದ್ದರು. ಆದರೆ ಸಂಜೆ ಟ್ಯೂಶನ್ ಗೆ ಹೋಗುವಾಗ ಆತ ಅಪಹರಣವಾಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.