ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ ಆತಂಕ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸೆ.27ರಿಂದ ಸೆ.29ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಳೆ ಅಬ್ಬರಿಸಿತ್ತು. ನಂತರ 15 ದಿನ ಬಿಡುವು ಕೊಟ್ಟಿತ್ತು. ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಸೋಮವಾರ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ದಿನ ಬಿಡುವು ಕೊಟ್ಟಿದ್ದ ವರುಣ ಶನಿವಾರ(ಸೆ.24) ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದಿತ್ತು. ಹವಾಮಾನ ಇಲಾಖೆ ಮಳೆ ಬೀಳುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದಿದ್ದರೂ ಅರ್ಧ ಗಂಟೆ ಕಾಲ ಮಳೆಯಾಗಿತ್ತು. ಈಗ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಬೀಳುತ್ತಿದೆ.