ಜಿಲ್ಲೆ

VIDEO: ಚಿತ್ರದುರ್ಗದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಬೆಂಗಳೂರಿನ ಖತರ್ನಾಕ್‌ ಗ್ಯಾಂಗ್‌

suchetana

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಗ್ರಾಮದಲ್ಲಿನ ಒಂಟಿ ಮನೆಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಬಂದು ದರೋಡೆ ಮಾಡಿ ಹೋದ ಖತರ್ನಾಕ್‌ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐದು ಜನ ದರೋಡೆಕೋರ ಗುಂಪನ್ನು ಬಂಧಿಸಿದ್ದಾರೆ ಪೊಲೀಸರು.

ನ.28ರಂದು ಬಂಗಾರಕ್ಕನಹಳ್ಳಿಯಲ್ಲಿ ದರೋಡೆ ನಡೆದಿತ್ತು. ತಿಪ್ಪೇಸ್ವಾಮಿ ಎಂಬುವರ ಒಂಟಿ ತೋಟದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ, ಬಂಗಾರ, 1 ಲಕ್ಷ ನಗುದು ದೋಚಿಕೊಂಡು ಹೋಗಿತ್ತು ಈ ತಂಡ.

ತಿಪ್ಪೇಸ್ವಾಮಿ, ಪತ್ನಿ, ಮಕ್ಕಳ ಕೈಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಸಿನಿಮಾ ಸ್ಟೈಲ್‌ನಲ್ಲಿ ದರೋಡೆ ಮಾಡಿದ್ದರು. ತಮ್ಮ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೃತ್ಯ ನಡೆಸಿದ್ದರು. ದರೋಡೆ ಬಳಿಕ ತಮ್ಮನ್ನು ಯಾರೂ ಹಿಡಿಯಲು ಬರಬಾರದು ಹಾಗೂ ಶ್ವಾನದಳಕ್ಕೆ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಮನೆ ತುಂಬ ಕಾರದ ಪುಡಿ ಎರಚಿ ಪರಾರಿಯಾಗಿದ್ದರು.

ಈ ಸಂಬಂಧ ಪೊಲೀಸರಲ್ಲಿ ತಿಪ್ಪೇಸ್ವಾಮಿ ಕುಟುಂಬ ದೂರು ದಾಖಲು ಮಾಡಿತ್ತು. ಆದರೆ ಪೊಲೀಸರು ದರೋಡೆಕೋರರು ಬೆನ್ನುಹತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ಅಭಿಷೇಕ್, ವಿಕಾಸ್, ವಜ್ರಮಣಿ, ಚಿಕ್ಕಗೊಂಡನಹಳ್ಳಿಯ ಶಿವಧ್ವಜ, ತಿಪ್ಪೇಸ್ವಾಮಿ ಬಂಧನಕ್ಕೆ ಒಳಗಾಗಿದ್ದಾರೆ. ಅವರಿಂದ 1ಲಕ್ಷ ರೂಪಾಯಿ ನಗದು, 3 ಲಕ್ಷ 37ಸಾವಿರ ಮೌಲ್ಯದ ಬೆಳ್ಳಿ, ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಕಾರು, ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕೃತ್ಯಕ್ಕೆ ತೋಟದ ಎದುರು ಮನೆಯ ಶಿವಧ್ವಜ ಎಂಬಾತನೇ ಪ್ಲ್ಯಾನ್‌ ಹಾಕಿದ್ದ ಎನ್ನುವ ಅಂಶವೂ ತನಿಖೆ ವೇಳೆ ಬಹಿರಂಗಗೊಂಡಿದೆ! (ದಿಗ್ವಿಜಯ ನ್ಯೂಸ್‌)