ಜಿಲ್ಲೆ

ಎಸ್.ಟಿ. ಸೋಮಶೇಖರ ಮಾತು ಸತ್ಯವಿರಬಹುದು

ಉತ್ತರ ಕನ್ನಡ ಡೆಸ್ಕ್

ಮುಂಡಗೋಡ: ಬಿಜೆಪಿಯಿಂದ ಎಂಟು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಶಾಸಕ ಎಸ್.ಟಿ. ಸೋಮಶೇಖರ ಹೇಳಿದ ಮಾತು ಸತ್ಯ ಇರಬಹುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ ಅವರ ಮಾತಿನಲ್ಲಿ ಸತ್ಯ ಇರುತ್ತದೆ. ಈ ಕುರಿತು ಮಾತನಾಡಲು ಸೋಮಶೇಖರ ಅವರಿಗೆ ಫೋನ್ ಕರೆ ಮಾಡಿದ್ದೆ, ಅವರು ಸಿಕ್ಕಿಲ್ಲ. ನಾನು ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದೇನೆ ಅಂತಾದ್ರೂ ಅನ್ನಿ ಅಥವಾ ಎರಡೂ ಕಾಲು ಹೊರಗೆ ಇಟ್ಟಿದ್ದೇನೆ ಅಂತಾದರೂ ಬರೆದುಕೊಳ್ಳಿ, ಅದು ನಿಮ್ಮ ವಿವೇಚನೆಗೆ ಸೇರಿದ್ದು. ಆದರೆ, ನಮ್ಮ ನಿರ್ಣಯ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಇದೂ ರಾಜಕೀಯ ಕ್ಷೇತ್ರ ಯಾವ ಯಾವ ಸಂದರ್ಭಕ್ಕೆ ಯಾವ ನಿರ್ಣಯ ಕೈಗೊಳ್ಳಬೇಕು ಎಂಬುದು ನಮಗೆ ಗೊತ್ತು ಎಂದರು.

ಉಪಚುನಾವಣೆಗೆ ಕಾಲ ಪಕ್ವವಾಗಿಲ್ಲ. ನಾನು ಯಾವ ಪಕ್ಷದ ಪರವಾಗಿಯೂ ಪ್ರಚಾರಕ್ಕೂ ಹೋಗಿಲ್ಲ. ಪ್ರಚಾರಕ್ಕೆ ಕರೆದರೆ ಈ ಬಗ್ಗೆ ಆಲೋಚನೆ ಮಾಡಿ ನಿರ್ಣಯಿಸುತ್ತೇನೆ. ಮುಡಾ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿದ್ದು, ಸತ್ಯಾಸತ್ಯತೆ ಗೊತ್ತಾಗುತ್ತದೆ. ಈ ಬಗ್ಗೆ ನಾವು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅವರು ಸಾರ್ವಜನಿಕ ಜೀವನದಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಅವರು ಯಾವತ್ತೂ ಇಂತಹ ಆರೋಪಗಳಿಗೆ ಒಳಗಾಗಿಲ್ಲ. ಅವರ ಮೇಲಿರುವ ಆರೋಪ ನ್ಯಾಯಾಂಗ ತನಿಖೆಯಿಂದ ಗೊತ್ತಾಗುತ್ತದೆ. ಅವರು ಒಬ್ಬರೇ ತೆಗೆದುಕೊಂಡಿದ್ದಾರಾ? ಬೇರೆ ಬೇರೆ ರಾಜಕೀಯ ಮುಖಂಡರು ತೆಗೆದುಕೊಂಡಿದ್ದಾರಾ ಎಂಬುದು ಗೊತ್ತಾಗಲಿದೆ ಎಂದರು.

ಸಚಿವ ಮಧು ಬಂಗಾರಪ್ಪನವರು ಇತ್ತೀಚೆಗೆ ಶಿವರಾಮ ಹೆಬ್ಬಾರ ಅವರು ಕಾಂಗ್ರೆಸ್ ಸೇರ್ಪಡೆಯಾಗಬೇಕು ಎಂದು ಹೇಳಿದ ಮಾತು ನನ್ನ ಮೇಲಿಟ್ಟಿರುವ ಅಭಿಮಾನ, ವಿಶ್ವಾಸ ಮತ್ತು ಪ್ರೀತಿಯಿಂದ ಹೇಳಿದ್ದಾರೆ. ಬೇರೆ ಯಾವುದೇ ಅರ್ಥದಿಂದಲ್ಲ ಎಂದರು.

ಸತೀಶ ಸೈಲ್ ಅವರ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಮ ಹೆಬ್ಬಾರ, ನ್ಯಾಯಾಂಗದ ನಿರ್ಣಯವನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ನ್ಯಾಯಾಲಯದ ಬಗ್ಗೆ ಮಾತನಾಡುವ ಅಧಿಕಾರವೂ ನಮಗಿಲ್ಲ. ನ್ಯಾಯಾಲಯದ ತೀರ್ಪಿಗೆ ನಾವು ಗೌರವ ಕೊಡಲೆಬೇಕು. ಆದರೆ, ಅದಕ್ಕಿಂತಲೂ ಮೇಲಿನ ನ್ಯಾಯಾಲಯದಲ್ಲಿ ಸೈಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದರು.