ಕೋಲಾರ: ಆನ್‌ಲೈನ್ ಶಿಕ್ಷಣ ಕುರಿತಂತೆ ಇಲಾಖೆಯು ಮುಂದಿನ ವಾರ ನಿರ್ಧಾರ ಮತ್ತು ತೀರ್ಮಾನ ಪ್ರಕಟಿಸಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ಕೋಲಾರದ ಜಿಪಂ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನ್‌ಲೈನ್ ತರಗತಿಗಳು ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ರೀತಿಯ ಗೀಳನ್ನು ಯಾವತ್ತೂ ನೋಡಿರಲಿಲ್ಲ. ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ಕೊಡುತ್ತಾರೆ ಅಂದರೆ ಅರ್ಥ ಆಗದ ವಿಚಾರ ಎಂದರು.
ಆನ್‌ಲೈನ್ ಪಾಠ ಎಷ್ಟರ ಮಟ್ಟಿಗೆ ಆರೋಗ್ಯಕರ, ಎಷ್ಟು ವರ್ಷ ಆದ ಮೇಲೆ ಶುರು ಮಾಡಿದರೆ ಸೂಕ್ತ ಎಂಬ ಬಗ್ಗೆ ನಿಮ್ಹಾನ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದೆ. ಮಗುವಿಗೆ 6 ವರ್ಷ ಆಗುವವರೆಗೆ ಸೂಕ್ತವಲ್ಲ ಎಂದು ಅಭಿಪ್ರಾಯ ನೀಡಿದ್ದಾರೆ. ಈ ಸಂಬಂಧ ಇಲಾಖೆ ಅವಲೋಕನ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಹೊಸ ಮಾರ್ಗಸೂಚಿ ಬಂದಿಲ್ಲ. 100 ದಿನ ತರಗತಿ ನಡೆಸಬೇಕು. ಉಳಿದ 100 ದಿನ ಮನೆಯಿಂದಲೇ ನಡೆಯಬೇಕು ಎಂದಿದೆ, ನಾವು ಕೂಡ ಕೇಂದ್ರದ ಮಾರ್ಗಸೂಚಿಗೆ ಕಾಯುತ್ತಿದ್ದೇವೆ ಎಂದರು.
ಶಿಕ್ಷಣ ಇಲಾಖೆ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಿದ್ದು, ಶಿಕ್ಷಣ ಇಲಾಖೆಯ ಮುಂದಿನ ದಿನಗಳು, ತರಗತಿ ಯಾವ ರೀತಿ ನಡೆಯಬೇಕೆಂದು ಯೋಚನೆ ಮಾಡಲೂ ಆಗುವುದಿಲ್ಲ, ಶಾಲೆಯ ಆಚೆ ಆಟ ಆಡುವುದಕ್ಕೂ ಕಡಿವಾಣ ಬೀಳುತ್ತದೆ, ಪ್ರಾರ್ಥನೆೆ ಹೇಗೆ ನಡೆಸಬೇಕು ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ತರಗತಿಗಳನ್ನು ಶಿಫ್ಟ್‌ನಲ್ಲಿ ನಡೆಸಬೇಕೋ, ಪರ‌್ಯಾಯ ದಿನ ನಡೆಸಬೇಕೋ, ಸಿಗುವ ಶೈಕ್ಷಣಿಕ ದಿನಗಳಿಗೆ ಅನುಗುಣವಾಗಿ ಪಠ್ಯ ಕಡಿತಗೊಳಿಸಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರದ ಮಾರ್ಗಸೂಚಿ ಬಂದ ನಂತರ ರಾಜ್ಯದ ನಿಲುವು ಪ್ರಕಟಿಸುವುದಾಗಿ ತಿಳಿಸಿದರು.
ಪರೀಕ್ಷೆಗೆ ಸಿದ್ಧತೆ: 1ರಿಂದ 9ನೇ ತರಗತಿ ಮಕ್ಕಳನ್ನು ಪರೀಕ್ಷೆ ನಡೆಸದೆಯೇ ಪಾಸ್ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾದ್ದರಿಂದ ಪಾಸ್ ಮಾಡುವುದು ಸಾಧು ಅಲ್ಲ, ಹಾಗಾಗಿ ಜೂ.25ರಿಂದ ಜು.4ರವರೆಗೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ ಎಂದರು.
10.30ಕ್ಕೆ ಪರೀಕ್ಷೆ ಆರಂಭ: ಪರೀಕ್ಷಾ ಕೊಠಡಿಯಲ್ಲಿ 24 ಮಕ್ಕಳ ಸಂಖ್ಯೆಯನ್ನು 18ರಿಂದ 20ಕ್ಕೆ ಇಳಿಸಲಾಗಿದೆ. ಡೆಸ್ಕ್‌ಗೆ ಎಷ್ಟು ಅಂತರ ಎಂಬುದನ್ನೂ ಹೈಕೋರ್ಟ್‌ಗೆ ತಿಳಿಸಿದ್ದೇವೆ. ಪರೀಕ್ಷೆ ಬರೆಯುವ 8.5 ಲಕ್ಷ ಮಕ್ಕಳಿಗೂ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ 2 ಮಾಸ್ಕ್, 4,500 ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೈಸರ್ ನೀಡಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ. ಮಕ್ಕಳ ಥರ್ಮಲ್ ಸ್ಕ್ರೀನಿಂಗ್ ನಡೆಸುವ ಸಲುವಾಗಿಯೇ ಪರೀಕ್ಷೆಯನ್ನು 10.30ಕ್ಕೆ ಆರಂಭಿಸಲಾಗುತ್ತಿದೆ. ಅನಾರೋಗ್ಯವಿರುವ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ನುಡಿದರು.
ಮಕ್ಕಳಿಗೆ ಸಾರಿಗೆ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಾಹನ ಬಳಸಲಾಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ವಾಸವಿರುವ ಪ್ರದೇಶದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದ್ವಿತೀಯ ಪಿಯು ಪರೀಕ್ಷೆ ಮೌಲ್ಯಮಾಪಕರ ಶೇ.65 ಬೇಡಿಕೆ ಈಡೇರಿದ್ದು, ಉಳಿದವುಗಳ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಮೌಲ್ಯಮಾಪನ ಕಾರ್ಯ ಸುಸೂತ್ರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಕರೊನಾ ನಿಯಂತ್ರಣಕ್ಕೆ ದೀರ್ಘಕಾಲ ಹಿಡಿಯಲಿದೆ. ಸೋಂಕು ಬರದಂತೆ ಕೆಲ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು, ಕರೊನಾ ಜತೆಗೆ ಜೀವಿಸುವುದು ಅನಿವಾರ್ಯ, ಆದಷ್ಟು ಬೇಗ ಲಸಿಕೆ ಬರಲಿ ಎಂದರು. ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಹಾಜರಿದ್ದರು.
ಪರೀಕ್ಷೆಗೆ ಎರಡ್ಮೂರು ದಿನ ಇರುವಾಗ ಯಾವುದೇ ಪ್ರದೇಶ ಕರೊನಾದಿಂದಾಗಿ ಕಂಟೇನ್ಮೆಂಟ್ ಜೋನ್ ಘೋಷಣೆಯಾದರೆ ಬೇರೆಡೆ ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆ ನಡೆಯುತ್ತಿದ್ದಾಗ ಸಮಸ್ಯೆಯಾದರೆ ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಹೊಸ ಅಭ್ಯರ್ಥಿಗಳೆಂದು ಪರಿಗಣಿಸಿ ಅವಕಾಶ ನೀಡಲಾಗುವುದು. ಎಸ್.ಸುರೇಶ್‌ಕುಮಾರ್, ಶಿಕ್ಷಣ ಸಚಿವ