ಕೋಲಾರ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ 8ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ನೇತ್ರ ಪರೀಕ್ಷೆ ಮಾಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪ್ರಕಟಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಾಲಾ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚುತ್ತಿದೆ. ಕೆಲ ಮಕ್ಕಳು ಕೀಳರಿಮೆಯಿಂದ ಸಮಸ್ಯೆ ಹೇಳಿಕೊಳ್ಳದೆ ತೊಂದರೆ ಅನುಭವಿಸುತ್ತಿದ್ದಾರೆ. 8ನೇ ತರಗತಿ ಮಕ್ಕಳಿಗೆ ಆಯಾ ಜಿಲ್ಲೆಗಳಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಕಲ್ಪಿಸಿದಲ್ಲಿ ಮಕ್ಕಳು ದೃಷ್ಟಿ ದೋಷದಿಂದ ಮುಕ್ತರಾಗುತ್ತಾರೆ. ಮುಂದಿನ ವರ್ಷ ಕೋಲಾರ ಸೇರಿ ಅವಶ್ಯಕತೆ ಇರುವ ಜಿಲ್ಲೆಗಳಲ್ಲಿ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಿಸಲು ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭೆ ಅನಾವರಣಕ್ಕೆ ವೇದಿಕೆ: 2002ರಲ್ಲಿ ಶಿಕ್ಷಣ ಇಲಾಖೆಯಿಂದ ಪ್ರಾರಂಭಿಸಿದ ಪ್ರತಿಭಾ ಕಾರಂಜಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಲ್ಲ. ವಿದ್ಯಾರ್ಥಿಗೆ ಪಕ್ಕೆಲುಬಿನ ಶಿಕ್ಷೆ ಕೊಡುವುದಲ್ಲ, ಪರಿಪೂರ್ಣ ಮನುಷ್ಯನಾಗಿ ಬದಲಾವಣೆಗೊಳ್ಳಲು ಮಾರ್ಗದರ್ಶನ ನೀಡುವುದೇ ಶಿಕ್ಷಣ. ಇದನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಮೂಲಕ ಸಾಕಾರಗೊಳಿಸಬಹುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀರಿನ ಅವಶ್ಯಕತೆಯಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಎತ್ತಿನಹೊಳೆಯಿಂದ ನೀರು ತರಲು ಶ್ರಮಿಸಲಾಗುವುದು. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವ ಜತೆಗೆ ವಿಮಾನ ನಿಲ್ದಾಣಕ್ಕೂ ಕೇಂದ್ರದ ಮೇಲೆ ಒತ್ತಡ ತರಲಾಗುವುದು ಎಂದರು.
ಫೆ.15ಕ್ಕೆ ಕೋಲಾರ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಆಗುವುದು ನಿಶ್ವಿತವೆಂದು ಘೋಷಿಸಿದರು.
ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಮಂಡನೆ: ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯ ವರ್ಗಾವಣೆ ಎಂಬುದು ಇಲ್ಲವಾದರೂ ವರ್ಗಾವಣೆಗಾಗಿ ಶಿಕ್ಷಕರು ಶಿಕ್ಷೆ ಅನುಭವಿಸುವಂತಾಗಿತ್ತು. ಇದನ್ನು ತಪ್ಪಿಸುವ ಸಲುವಾಗಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ತರಲು ಪ್ರಯತ್ನ ನಡೆದಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆಗಾಗಿ ಬುಧವಾರ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆ ಸಿದ್ಧಪಡಿಸಲಾಗುತ್ತಿದ್ದು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಕಾಯ್ದೆಗೆ ಅನುಮೋದನೆ ಪಡೆಯಲಾಗುವುದು ಎಂದರು.
ಶಿಕ್ಷಕರ ವರ್ಗಾವಣೆ ವಿಚಾರ ಜಟಿಲವಾಗಿತ್ತು. ವರ್ಗಾವಣೆಯಲ್ಲಿ ಪ್ರಭಾವಿಗಳ ಕೈವಾಡ ಇರುವುದು ಸತ್ಯವೂ ಹೌದು. ಇದಕ್ಕೆ ಕಡಿವಾಣ ಹಾಕಲು ವರ್ಷವಿಡೀ ಕೌನ್ಸೆಲಿಂಗ್ ಪ್ರಕ್ರಿಯೆ ಮಾಡದೆ ಜೂನ್ ಒಳಗೆ ಮುಗಿಸಿ ಶಿಕ್ಷಕರು ಇಷ್ಟಪಟ್ಟು ಪಾಠ ಮಾಡುವ ವಾತಾವರಣ ಸೃಷ್ಟಿಸಲಾಗುವುದು ಎಂದರು.
ಈಗಿರುವ ವಲಯವಾರು ನೀತಿಯಡಿ ಶಿಕ್ಷಕರನ್ನು ಎಲ್ಲಿಗೆ ಬೇಕಾದರೂ ವರ್ಗಾವಣೆ ಮಾಡಬಹುದಿತ್ತು. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕಿಯರಿಗೆ ಹೆಚ್ಚು ತೊಂದರೆಯಾಗುತ್ತಿತ್ತು. ನಾವೀಗ ತಾಲೂಕು ವಲಯದಲ್ಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಚಿಂತನೆ ನಡೆಸಿದ್ದೇವೆ ಎಂದರು.
ವಿಡಿಯೋ ಸಿದ್ಧ: ಸುಗಮವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ತಂಡಗಳು ಉತ್ಸಾಹದಿಂದ ಕೆಲಸ ಮಾಡುತ್ತಿವೆ. ಮಕ್ಕಳಲ್ಲಿನ ಗೊಂದಲ, ಆತಂಕ ನಿವಾರಿಸಲು ನುರಿತವರ ಮಾರ್ಗದರ್ಶವಿರುವ ವಿಡಿಯೋ ಸಿದ್ಧಪಡಿಸಲಾಗುತ್ತಿದ್ದು, 8 ದಿನಗಳಲ್ಲಿ ಈ ವಿಡಿಯೋವನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಾಗುವುದು. ಈ ವರ್ಷದಿಂದ ಮಕ್ಕಳಿಗೆ ಶಾಲೆ ಆರಂಭದ ದಿನವೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಪ್ರಕ್ರಿಯೆ ನಡೆದಿದೆ. ಜತೆಗೆ ಮಕ್ಕಳಿಗೆ ಪಠ್ಯದ ಜತೆಗೆ ಮೌಲ್ಯ ಕಲಿಸಲು ಪ್ರತಿ ತಿಂಗಳು ಎರಡು ಶನಿವಾರ ಬ್ಯಾಗ್‌ಲೆಸ್ ಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ ಎಂದು ಸುರೇಶ್‌ಕುಮಾರ್ ಹೇಳಿದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ತೂಪಲ್ಲಿ ಆರ್.ಚೌಡರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕಿ ಸಿರಿಯಣ್ಣವರ್ ಲಲಿತಾ ಚಂದ್ರಶೇಖರ್, ಡಿಸಿ ಜೆ.ಮಂಜುನಾಥ್, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಉಪಾಧ್ಯಕ್ಷೆ ಲಕ್ಷ್ಮೀ, ಜಿಪಂ ಸದಸ್ಯರಾದ ಶ್ರೀನಿವಾಸ್, ಅರುಣ್ ಪ್ರಸಾದ್, ಅರವಿಂದ್, ಮುಳಬಾಗಿಲು ತಾಪಂ ಅಧ್ಯಕ್ಷ ಶ್ರೀನಿವಾಸ್, ಎಸ್ಪಿ ಕಾರ್ತಿಕ್ ರೆಡ್ಡಿ, ಎಡಿಸಿ ಎಚ್. ಪುಷ್ಪಲತಾ, ಡಿಡಿಪಿಐ ಕೆ.ರತ್ನಯ್ಯ, ತಹಸೀಲ್ದಾರ್ ಶೋಭಿತಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ಪೌರಾಯುಕ್ತ ಆರ್.ಶ್ರೀಕಾಂತ್ ಇನ್ನಿತರರು ಉಪಸ್ಥಿತರಿದ್ದರು.
ಮಕ್ಕಳ ಬಾಲ್ಯ ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಪಾಠದೊಂದಿಗೆ ಆಟ ಹೇಳಿಕೊಡಬೇಕು, ಕಲೆ ಸಂಸ್ಕೃತಿ ಮೈಗೂಡಿಸಿಕೊಳ್ಳಲು ಉತ್ತೇಜನ ನೀಡಿದರೆ ಮಕ್ಕಳು ಕ್ರಿಯಾಶೀಲರಾಗಲು, ಸೃಜನಶೀಲರಾಗಲು ನೆರವಾಗುತ್ತದೆ. ಮಕ್ಕಳಲ್ಲಿ ಇರುವ ಬಹುಮುಖ ಪ್ರತಿಭೆ ಗುರುತಿಸಿ ಉತ್ತೇಜನ ನೀಡುವುದು ಪಾಲಕರು ಮತ್ತು ಶಿಕ್ಷಕರ ಕರ್ತವ್ಯ. ಎಸ್.ಸುರೇಶ್ ಕುಮಾರ್, ಸಚಿವ