ಜಿಲ್ಲೆ

ಶಾಲೆಗಳ ಪುನರಾರಂಭ ಕುರಿತು ಪೋಷಕರಿಂದಲೇ ಅಭಿಪ್ರಾಯ ಸಂಗ್ರಹ: ಸಚಿವ ಸುರೇಶ್​ ಕುಮಾರ್​

ಬೆಂಗಳೂರು: ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಪುನರಾರಂಭ ಕುರಿತು ಜೂ. 10-12ರ ಅವಧಿಯಲ್ಲಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿರುವುದಾಗಿ ಸಚಿವ ಸುರೇಶ್​ ಕುಮಾರ್​ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಿನಂಕ 30.05.2020 ರಂದು 5ನೇ ಹಂತದ ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಪುನರಾರಂಭ ಮಾಡಲಿವೆ. ಪಾಲಕರು ಮತ್ತು ಇತರೆ ಪಾಲುದಾರರೊಂದಿಗೆ ಆಯಾ ಸಂಸ್ಥೆಯ ಮಟ್ಟದಲ್ಲಿ ಸಮಾಲೋಚನೆ ನಡೆಸಿ, ಅದರ ಆಧಾರದ ಮೇಲೆ ಜುಲೈ ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ದಿನಾಂಕ 1.6.2020 ರಂದು ನನ್ನ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ನಮ್ಮ‌ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರ ಸಭೆಗಳನ್ನು ಪ್ರತಿ ಶಾಲೆಯ‌ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ಅವರು ತಿಳಿಸಿದ್ದಾರೆ.

ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ (ಖಾಸಗಿ) ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳು ಕೂಡಲೇ (10.6.2020 ರಿಂದ 12.6.2020 ರ ನಡುವಿನ ಅವಧಿಯಲ್ಲಿ) ಪೋಷಕರು ಮತ್ತು ಎಸ್​ಡಿಎಂಸಿ ಸದಸ್ಯರನ್ನು ಸಭೆಗೆ ಆಹ್ವಾನಿಸಿ ಈ ಕೆಳಕಂಡ ವಿಷಯಗಳ ಕುರಿತು ಅವರ ಅಭಿಪ್ರಾಯ ಪಡೆಯಲು ಸೂಚಿಸಲಾಗಿದೆ.

1) ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ ಕುರಿತು.

2) ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನದ ಬಗ್ಗೆ.

3) ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ.

ರಾಜ್ಯದ ಎಲ್ಲಾ ಪೋಷಕರು ಮತ್ತು ಎಸ್​ಡಿಎಂಸಿ ಸದಸ್ಯರುಗಳು ಈ ಸಭೆಗಳಲ್ಲಿ‌ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಸುರೇಶ್​ ಕುಮಾರ್​ ಅವರು ಮನವಿ ಮಾಡಿದ್ದಾರೆ.