ಜಿಲ್ಲೆ

ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಶಿವಮೊಗ್ಗ ಕೋರ್ಟ್​ನಲ್ಲಿವೆ ಅವಕಾಶ- ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ 4 ಶೀಘ್ರಲಿಪಿಗಾರರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪದವಿಪೂರ್ವ ಶಿಕ್ಷಣ ಪರೀಕ್ಷಾಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್​ ಪ್ರಾಕ್ಟೀಸ್​ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಹಾಗೂ ಕನ್ನಡ ಮತ್ತು ಇಂಗ್ಲಿಷ್​ ಬೆರಳಚ್ಚು ಹಾಗೂ ಶೀಘ್ರಲಿಪಿ (ಷಾರ್ಟ್​ಹ್ಯಾಂಡ್​) ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

27,650 ರಿಂದ 52,650 ರೂ. ಮಾಸಿಕ ವೇತನದೊಂದಿಗೆ ಇತರ ಭತ್ಯೆ ಇರಲಿದೆ. ಗರಿಷ್ಠ ವಯೋಮಿತಿ 35 ವರ್ಷವಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ 38ರಿಂದ 40 ವರ್ಷ ವಯೋಸಡಿಲಿಕೆ ಇರಲಿದೆ. ಸಾಮಾನ್ಯ ಅಭ್ಯರ್ಥಿಗೆ 200 ರೂ. ಮೀಸಲಾತಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ನೇರವಾಗಿ ಬಂದ ಮತ್ತು ಶುಲ್ಕ ಪಾವತಿಸದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಯಲ್ಲಿ ಇ-ಮೇಲ್​ ವಿಳಾಸ ಮತ್ತು ಮೊಬೈಲ್​ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಶೀಘ್ರಲಿಪಿಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಆಯ್ಕೆಯಾದ ಮೂರು ತಿಂಗಳೊಳಗೆ ಸರ್ಕಾರ ಅನುಮೋದಿಸಿದ ಏಜೆನ್ಸಿಯಲ್ಲಿ ಕಂಪ್ಯೂಟರ್​ ಸಾರತಾ ಪರೀಕ್ಷೆ ತೇರ್ಗಡೆಯಾಗಬೇಕು. ಅರ್ಹತಾ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 27.7.2022
ಅಧಿಸೂಚನೆಗೆ: https://bit.ly/3aeRb3B


ಮಾಹಿತಿಗೆ: http://districts.ecourts.gov.in