ಸಾಂದರ್ಭಿಕ ಚಿತ್ರ 
ಜಿಲ್ಲೆ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ: ಶೇ.37.08 ವಿದ್ಯಾರ್ಥಿಗಳು ಪಾಸ್​

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ವಿದ್ಯಾರ್ಥಿಗಳು http://www.karresults.nic.in ವೆಬ್​ಸೈಟ್​ನಲ್ಲಿ ಫಲಿತಾಂಶ ನೋಡಬಹುದು. ಜತೆಗೆ ಆಯಾಯ ಕಾಲೇಜುಗಳಲ್ಲೂ ಫಲಿತಾಂಶ ಪ್ರಕಟವಾಗಲಿದೆ.

ಪೂರಕ ಪರೀಕ್ಷೆಗೆ ಒಟ್ಟು 1,85,415 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿಕೊಂಡಿದ್ದು, 1,75,905 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಜರಾಗಿದ್ದರು. 65,233 ಮಕ್ಕಳು ಉತ್ತೀರ್ಣರಾಗಿದ್ದಾರೆ. ಇವರ ಪೈಕಿ 36,637 ವಿದ್ಯಾರ್ಥಿಗಳು ಹಾಗೂ 28,596 ವಿದ್ಯಾರ್ಥಿನಿಯರು.

ತೇರ್ಗಡೆಯಾಗಿರುವವರ ಶೇಕಡಾವಾರು ಫಲಿತಾಂಶ 37.08. ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ ಶೇ.34.91 ಹಾಗೂ ವಿದ್ಯಾರ್ಥಿನಿಯರು ಶೇ.40.30. ನಗರ ಪ್ರದೇಶದಲ್ಲಿ ಶೇ.37.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಉತ್ತೀರ್ಣರಾದವರ ಶೇಕಡಾವಾರು ಸಂಖ್ಯೆ 36.36.

ಮರುಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪಿಯು ಮಂಡಳಿಯು ಈ ಕೆಳಕಂಡ ಸೂಚನೆಗಳನ್ನು ನೀಡಿದೆ:

1) ಮರುಮೌಲ್ಯಮಾಪನದಲ್ಲಿ ನಿಗದಿಪಡಿಸಿರುವ ಅಂಕಗಳಿಗಿಂತ ಹೆಚ್ಚಿನ ಅಥವಾ ಕಡಿಮೆ ಅಂಕಗಳು ಬಂದಲ್ಲಿ, ಅಂಕಗಳೊಂದಿಗೆ ಫಲಿತಾಂಶವನ್ನು ಪರಿಷ್ಕರಿಸಿ ಪ್ರಕಟಿಸಲಾಗುವುದು. ಯಾವುದೇ ಕಾರಣಕ್ಕೂ ಈ ಮೊದಲು ಪಡೆದ ಅಂಕಗಳನ್ನು ಮರುಸ್ಥಾಪಿಸಲು ವಿದ್ಯಾರ್ಥಿಗೆ ಅವಕಾಶ ಇರುವುದಿಲ್ಲ.

2) ಮರುಮೌಲ್ಯಮಾಪನದ ಬಗ್ಗೆ ಮರುಮೌಲ್ಯಮಾಪಕರ ಸಮಿತಿ ತೆಗೆದುಕೊಂಡ ನಿರ್ಧಾರವೇ ಅಂತಿಮ. ಇದರ ಮೇಲೆ ಮರು ಪರಿಶೀಲನೆ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.

3) ಮರುಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆಯ ವೆಬ್​ಸೈಟ್​ http://pue.karnataka.gov.in ಪ್ರಕಟಿಸಲಾಗುವುದು.

4) ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಮರುಎಣಿಕೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

5) ಅಂಕಗಳ ಮರುಎಣಿಗೆಗೆ ಶುಲ್ಕ ಇರುವುದಿಲ್ಲ. ಮರುಎಣಿಕೆ ಫಲಿತಾಂಶವನ್ನು ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.

6) ಮರು ಎಣಿಕೆ ಮತ್ತು ಮರುಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಪ್ರತಿಯನ್ನು ಡಿಜಿಟಲ್​ ಫಾರ್ಮ್ಯಾಟ್​ ಮೂಲಕ ಡಿಜಿಲಾಕರ್​ನಲ್ಲಿಯೂ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವರವಾದ ಸುತ್ತೋಲೆಯನ್ನು ಇಲಾಖೆ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.

7) 2022ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮರುಮೌಲ್ಯಮಾಪನ ಉತ್ತರ ಪತ್ರಿಕೆಗಳ ಪ್ರತಿ ಪಡೆಯಲು, ಮರುಮೌಲ್ಯಮಾಪನ ಮತ್ತು ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ಬಗ್ಗೆ ಇಲಾಖೆ ವೆಬ್​ಸೈಟ್​ ನೋಡಬಹುದು.

8) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಆಯಾ ಕಾಲೇಜುಗಳಿಗೆ ಮರು ಎಣಿಕೆ ಮತ್ತು ಮರುಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಕಳುಹಿಸಿಕೊಡಲಾಗುವುದು.

9) ಇಲಾಖೆಯ ಸಹಾಯವಾಣಿ 080-23083860/ 23083864