ಜಿಲ್ಲೆ

ಕರೊನಾ ಹುಷಾರಾಗಿಲ್ಲ ಎಂದು ನಕಲಿ ರಿಪೋರ್ಟ್​ ಪಡೆಯುತ್ತಲೇ ಇದ್ದ ಸಂಪತ್​ರಾಜ್​ ಪರಾರಿ?

suchetana

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿ, ಬೆಂಕಿ ಹಚ್ಚಿಸಿರುವ ಪ್ರಮುಖ ಆರೋಪಿ ಕಾಂಗ್ರೆಸ್​ನ ಮಾಜಿ ಮೇಯರ್​ ಸಂಪತ್​ ಕುಮಾರ್​ ಆಸ್ಪತ್ರೆಯಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸೇರಿದಂತೆ ಪೊಲೀಸ್​ ಠಾಣೆ ಇನ್ನಿತರ ಕಡೆಗಳಲ್ಲಿ ಬೆಂಕಿ ಹಚ್ಚಿಸಿ ನಂತರ ಸಿಕ್ಕಿಬಿದ್ದಿರುವ ಸಂಪತ್​ ಕುಮಾರ್​ ಕರೊನಾದ ಹೆಸರು ಹೇಳಿ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸಿಬಿನ ತನಿಖಾಧಿಕಾರಿಗಳು ತಮ್ಮನ್ನು ಬಂಧಿಸಲು ಬರುವ ಸುದ್ದಿ ತಿಳಿಯುತ್ತಲೇ ಕರೊನಾ ರಿಪೋರ್ಟ್​ ನೀಡಿ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಗೆ ದಾಖಲಾಗಿ ಎರಡು ತಿಂಗಳಾಗುತ್ತಾ ಬಂದರೂ ಆಸ್ಪತ್ರೆಯ ವೈದ್ಯರು ಸಂಪತ್​ಗೆ ಹುಷಾರಿಲ್ಲವೆಂಬ ವರದಿ ನೀಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಹಲವು ಅನುಮಾನಗಳು ಸುಳಿದಾಡುತ್ತಿರುವ ನಡುವೆಯೇ ನಿನ್ನೆ ರಾತ್ರಿ ಸಂಪತ್​ಕುಮಾರ್​ ಅವರು ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ.

ಅವರು ಕೇರಳದ ಕಡೆಗೆ ಹೋಗಿದ್ದಾರೆ ಎನ್ನಲಾಗಿದ್ದು, ಸಿಸಿಬಿ ಪೊಲೀಸರು, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದರ ಸತ್ಯಾಸತ್ಯತೆ ಅಧಿಕೃತವಾಗಿ ಬಹಿರಂಗಗೊಳ್ಳಬೇಕಿದೆ.

ಇದಾಗಲೇ ಎರಡು ಬಾರಿ ಕರೊನಾ ಸೋಂಕಿನ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್​ಕುಮಾರ್​ಗೆ ಇದೀಗ ಮೂರನೆಯ ಬಾರಿ ಸೋಂಕು ತಗುಲಿದೆ ಎಂದು ವೈದ್ಯರು ರಿಪೋರ್ಟ್​ ಕೊಟ್ಟಿದ್ದರು. ಅದನ್ನು ಸಿಸಿಬಿಗೆ ರವಾನೆ ಮಾಡಲಾಗಿತ್ತು.

ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದದ ಸಂದರ್ಭದಲ್ಲಿ ಇವೆಲ್ಲಾ ಸುಳ್ಳು ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿತ್ತು. ಈ ಕುರಿತು ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂಥ್​ ಅವರಿಗೆ ಸಿಸಿಬಿ ವರದಿ ನೀಡಿತ್ತು. ಅವರು ಇನ್ನಷ್ಟೇ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುವುದಿದ್ದರು.

ತನ್ನ ಅಸಲಿ ಬಣ್ಣ ತಿಳಿಯುತ್ತಲೇ ಸಂಪತ್​ರಾಜ್​ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಫೇಸ್​ಬುಕ್​ನಲ್ಲಿ ಹಿಂದೂ ದೇವತೆಗಳ ವಿರುದ್ಧ ಪೋಸ್ಟ್​ ಮಾಡಿದ್ದ ಒಬ್ಬನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಖಂಡ ಶ್ರೀನಿವಾಸ ಅವರ ಅಳಿಯ ನವೀನ್​ ಎಂಬಾತ ಅದಕ್ಕೆ ಪೈಗಂಬರ್​ ವಿರುದ್ಧ ಹಾಕಿದ್ದ ಕಮೆಂಟ್​ ಅನ್ನೇ ಮುಂದುಮಾಡಿಕೊಂಡು ಗಲಭೆ ಸೃಷ್ಟಿಸಿರುವ ವಿವಾದ ಇದಾಗಿದೆ.