ಜಿಲ್ಲೆ

ಬಹರೆನ್‌ನಲ್ಲಿ ಸಿಎ ಎಸ್.ಎಸ್.ನಾಯಕ್‌ರಿಂದ ಉಪನ್ಯಾಸ

Mangaluru - Hariprasad Rai




ಮಂಗಳೂರು : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ಬಹರೆನ್ ಮತ್ತು ಕರ್ನಾಟಕ ಸೋಶಿಯಲ್ ಕ್ಲಬ್ ಮನಾಮ ಸಹಯೋಗದಲ್ಲಿ ಮನಾಪದ ಕರ್ನಾಟಕ ಸೋಶಿಯಲ್ ಕ್ಲಬ್ ಸಭಾಂಗಣದಲ್ಲಿ ನಡೆದ ಮಾಹಿತಿ ಸಮಾವೇಶದಲ್ಲಿ ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಅವರು ಉಪನ್ಯಾಸ ನೀಡಿದರು.
ಆದಾಯ ತೆರಿಗೆ, ಜಿಎಸ್‌ಟಿ, ಎನ್‌ಆರ್ ಐಗಳಿಗೆ ಲಭ್ಯವಿರುವ ಹೂಡಿಕೆ ಆಯ್ಕೆಗಳು, ಭಾರತದಲ್ಲಿ ಉದ್ಯಮಶೀಲತೆಯ ಅವಕಾಶಗಳು, ಭಾರತೀಯ ಮಾರುಕಟ್ಟೆಯಲ್ಲಿ ಸಂಪತ್ತಿನ ಹೂಡಿಕೆ, ಎನ್‌ಪಿಎಸ್, ರಿಯಲ್ ಎಸ್ಟೇಟ್ ಹೂಡಿಕೆ, ಇತ್ಯಾದಿಗಳ ಬಗ್ಗೆ ಸಿಎ ಎಸ್.ಎಸ್.ನಾಯಕ್ ಅವರು ಅನಿವಾಸಿ ಭಾರತೀಯರಿಗೆ ಮಹತ್ವದ ಮಾಹಿತಿ ನೀಡಿದರು.
ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ ಎಸ್.ಎಸ್.ನಾಯಕ್ ಅವರು ಆರ್ಥಿಕ ನಿರ್ವಹಣೆ, ತೆರಿಗೆ ಪಾವತಿಯಲ್ಲಿ
ಸವಾಲುಗಳು ಹಾಗೂ ವಿದೇಶಿ ಹೂಡಿಕೆ ನಿಯಮಗಳ ಬಗ್ಗೆ ವಿವರ ನೀಡಿದರು. ಧನ ನಿರ್ವಹಣೆ ಮತ್ತು ಹೂಡಿಕೆ ಕುರಿತು ಜಾಗೃತಿ ಮೂಡಿಸಿದರು. ಅನಿವಾಸಿ ಭಾರತೀಯರಿಗೆ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭ ಸಿಎ ಎಸ್.ಎಸ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮಾಹಿತಿ ಕಾರ್ಯಕ್ರಮವನ್ನು ಅನಿವಾಸಿ ಭಾರತೀಯರು ಪ್ರಶಂಸಿಸಿದರು .
ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ಬಹರೆನ್‌ನ ಪ್ರಧಾನ ಕಾರ್ಯದರ್ಶಿ ರೋಷನ್ ಲೂಯಿಸ್, ಸಹಾಯಕ ಪ್ರಧಾನ ಕಾರ್ಯದರ್ಶಿ ವಿಠ್ಠಲ್ , ಜಮಾಲುದ್ದೀನ್ , ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ ಜಾವೆದ್ ಪಾಶ , ಸಲಹೆಗಾರ ಆಸ್ಟಿನ್ ಸಂತೋಷ್ ಮತ್ತು ಕರ್ನಾಟಕ ಸೋಶಿಯಲ್ ಕ್ಲಬ್,ಮನಾಮ ಅಧ್ಯಕ್ಷ ಆನಂದ್ ಲೋಬೊ ಉಪಸ್ಥಿತರಿದ್ದರು.