ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಶಾಸಕ ರೋಷನ್ ಬೇಗ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ.
ಬಂಧನದಲ್ಲಿರುವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ರೋಷನ್ ಬೇಗ್ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಅದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ವಿಧಿಸುವ ಎಲ್ಲಾ ಷರತ್ತುಗಳನ್ನೂ ಕೋರ್ಟ್ ವಿಧಿಸಿದೆ. ಅದೇನೆಂದರೆ: ನ್ಯಾಯಾಲಯದ ಅನುಮತಿ ಇಲ್ಲದೆ ಬೆಂಗಳೂರನ್ನು ಬಿಟ್ಟು ಹೊರ ಹೋಗುವಂತಿಲ್ಲ; ಪ್ರತಿ 2 ಮತ್ತು 4ನೇ ಸೋಮವಾರ ಹಾಗೂ ಸೂಚನೆ ನೀಡಿದಾಗ ಕೋರ್ಟ್ ಮುಮದೆ ಹಾಜರಾಗಬೇಕು; ಪಾಸ್‌ಪೋರ್ಟ್ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು; ಸಿಬಿಐ ನಡೆಸುವ ಎಲ್ಲ ತನಿಖೆಗೂ ಸಂಪೂರ್ಣವಾದ ಸಹಕಾರ ನೀಡಬೇಕು; ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ; ಪ್ರಕರಣದ ಬಾಕಿ ಇರುವ ತನಿಖೆಗೂ ಸಹಕಾರ ನೀಡಬೇಕು, ತಮ್ಮ ವಿಳಾಸ ಬದಲಾದರೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು... ಈ ಎಲ್ಲಾ ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ರೋಷನ್ ಬೇಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಬೇಕು. ಅವರು ತನಿಖೆಗೆ ಸಹಕರಿಸಿದ್ದಾರೆ. ಈಗಾಗಲೇ ತನಿಖೆ ಮುಕ್ತಾಯವಾಗಿದೆ ಎಂದು ರೋಷನ್ ಬೇಗ್ ಅವರ ವಕೀಲರು ವಾದಿಸಿದ್ದನ್ನು ಕೋರ್ಟ್ ಮಾನ್ಯ ಮಾಡಿದೆ.
ಏನಿದು ಕೇಸ್: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಥಳಕು ಹಾಕಿಕೊಂಡಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಅಲಿಖಾನ್ ಬಂಧನಕ್ಕೂ ಮೊದಲೇ ವಿಡಿಯೋ ಹರಿ ಬಿಟ್ಟು, ರೋಷನ್ ಬೇಗ್ ಹಣ ಪಡೆದಿದ್ದಾರೆಂದು ಆರೋಪಿಸಿದ್ದರು. ಈ ಕುರಿತು ಎಸ್ಐಟಿ ಸಹ ರೋಷನ್ ಬೇಗ್ ವಿಚಾರಣೆ ನಡೆಸಿತ್ತು.
ಬಳಿಕ ಇದೇ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬೆನ್ನಲ್ಲೆ ರೋಷನ್ ಬೇಗ್ ವಿಚಾರಣೆ ಮುಂದುವರೆಸಿತ್ತು. ಮನ್ಸೂರ್ ಮಾಡಿದ ಆರೋಪಕ್ಕೆ ಪುಷ್ಟಿ ನೀಡುವಂಥ ಆಧಾರಗಳು ಸಿಕ್ಕ ಬೆನ್ನಲ್ಲೆ ಸಿಬಿಐ ಬೇಗ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್ ನೀಡಿ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.
ಈ ನಡುವೆ ಮನ್ಸೂರ್ ಖಾನ್ ನಾನು ರೋಷನ್ ಬೇಗ್ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್ ಬೇಗ್ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂದು ಮೂಲಗಳು ಹೇಳಿವೆ.