ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣದ ಕುರಿತು ಸುದ್ದಿಯಾಗುತ್ತಿದ್ದಂತೆಯೇ ಗೋಕಾಕ್ನಲ್ಲಿ ಇದಾಗಲೇ ಅವರ ಅಭಿಮಾನಿಗಳಿಂದ ಭಾರಿ ಪ್ರತಿಭಟನೆ, ಆತ್ಮಹತ್ಯೆಗೆ ಯತ್ನ ಎಲ್ಲವೂ ನಡೆದಿದೆ. ಈ ಘಟನೆ ಬೆಳಕಿಗೆ ಬಂದ ಮೊದಲ ದಿನವೇ ಅಭಿಮಾನಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೂ ನಡೆದಿದೆ.
ಇಂದು ಅದೇ ಮಾದರಿಯಲ್ಲಿ ಇನ್ನೋರ್ವ ಅಭಿಮಾನಿ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗೋಕಾಕ್‍ನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಣಪತಿ ಅವರು ಬೆಂಕಿಯಿದ್ದ ಟೈಯರ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಗೋಕಾಕ್ ನಗರದ ಚಿನವಾರ ಗಲ್ಲಿಯ ನಿವಾಸಿಯಾಗಿರುವ ಗಣಪತಿ ರಜಪೂತ (55) ಎಂಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಇವರ ಸ್ಥಿತಿ ಚಿಂತಾಜನಕವಾಗಿದೆ. ನಮ್ಮ ಸಾಹುಕಾರ್ ಅಂಥವನಲ್ಲ, ಅಂಥ ತಪ್ಪು ಮಾಡಲ್ಲ. ತಪ್ಪು ಮಾಡುವುದು ಹೇಗೆ ಎಂಬುದು ಗೊತ್ತು ಕೂಡ ಇಲ್ಲ. ಈ ಕಲ್ಲಳ್ಳಿ ಯಾರಿವನು, ಈ ಪ್ರಕರಣ ಸಿಬಿಐ ತನಿಖೆ ಆಗಲೇ ಬೇಕು. ನಾನು ಸತ್ತು ಹೋಗಬೇಕು ಎನ್ನುತ್ತಲೇ ಬೆಂಕಿಗೆ ಜಿಗಿದಿದ್ದಾರೆ.
ಸ್ಥಳೀಯರು ಕೂಡಲೇ ಅವರನ್ನು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕೂಡ ಇದನ್ನೇ ಗಣಪತಿ ಕನವರಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.