ಬೆಂಗಳೂರು: ನಗರದ ಜ್ಯುಡಿಶಿಯಲ್ ಲೇಔಟ್ನಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರು ಮನೆಯನ್ನು ಅವರ ತಂದೆ ಮಾರಾಟಕ್ಕೆ ಇಟ್ಟಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಕೊಂಡಿರುವ ಮಗಳ ಕೋರ್ಟ್, ವಕೀಲರ ಫೀಸು ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಖಾಸಗಿ ವೆಬ್ಸೈಟ್ ಒಂದರಲ್ಲಿ ರಾಗಿಣಿ ತಂದೆ ರಾಕೇಶ್ ದ್ವಿವೇದಿ ಮನೆ ಸೇಲ್ಗೆ ಇದೆ ಎಂಬ ಜಾಹೀರಾತು ನೀಡಿದ್ದಾರೆ.
ನ್ಯಾಯಾಂಗ ಬಡಾವಣೆಯ ಅನನ್ಯ ಅಪಾರ್ಟ್ಮೆಂಟ್ನಲ್ಲಿ ಇರುವ ತಮ್ಮ ಮೂರು ಬಿಎಚ್ಕೆ ಮನೆಯನ್ನು 2 ಕೋಟಿ ರೂಪಾಯಿಗೆ ಸೇಲ್ಗೆ ಇಟ್ಟಿದ್ದಾರೆ.
ವಕೀಲರಿಗೆ ಫೀಸ್ ಕೊಡಲು ನನ್ನ ಬಳಿ ಹಣವಿಲ್ಲ. ಆದ್ದರಿಂದ ಮನೆ ಮಾರಾಟ ಮಾಡುತ್ತಿರುವುದಾಗಿ ಆಪ್ತರ ಬಳಿ ರಾಕೇಶ್ ಅವರು ಅಳಲು ತೋಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇದು ರಾಗಿಣಿಯ ಕನಸಿನ ಮನೆ ಕೂಡ. ಈ ಮನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮಗೆ ಇಷ್ಟವಾಗಿರುವ ರೀತಿಯಲ್ಲಿ ಇಂಟೀರಿಯರ್ ಡಿಸೈನ್ ಮಾಡಿಸಿದ್ದರು ರಾಗಿಣಿ. ತಮ್ಮ ಅಕ್ರಮ ಡ್ರಗ್ಸ್ ದಂಧೆಯ ಹಣದಲ್ಲಿ ಈ ಹಣವನ್ನು ಕಟ್ಟಿಕೊಂಡಿದ್ದು, ಸದ್ದಿಲ್ಲದೇ ಮನೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ ರಾಗಿಣಿ ಪಾಲಕರು ಎಂಬ ಆರೋಪವೂ ಕೇಳಿಬರುತ್ತಿದೆ.
ಈ ನಡುವೆ, ರಾಗಿಣಿ ತಂದೆ ರಾಕೇಶ್ ಅವರು, ತುಂಬಾ ನೊಂದುಬೆಂದು ಹೋಗಿದ್ದು, ಸಾರ್ವಜನಿಕವಾಗಿ, ಅಕ್ಕಪಕ್ಕದವರ ಜತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)