ಮುಧೋಳ ನಗರದ ಶ್ರೀ ಎಸ್.ಆರ್. ಕಂಠಿ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರಬಸವ ಸೂಳಿಭಾವಿ, ಕಾಲೇಜ್ ಸಮಿತಿ ಸದಸ್ಯ ರವೀಂದ್ರ ಸಾವಳಗಿಮಠ ಇದ್ದರು. 
ಜಿಲ್ಲೆ

ಎಸ್.ಆರ್. ಕಂಠಿ ಕಾಲೇಜಿಗೆ ಅ. 21, 22 ರಂದು ನ್ಯಾಕ್ ತಂಡ

ಮುಧೋಳ: ಅತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ನಗರದ ಶ್ರೀ ಎಸ್.ಆರ್. ಕಂಠಿ ಮಹಾವಿದ್ಯಾಲಯಕ್ಕೆ ಅ.21, 22 ರಂದು ನ್ಯಾಕ್ ತಂಡ ಭೇಟಿ ನೀಡಲಿದೆ ಎಂದು ಬವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.

ನಗರದ ಎಸ್.ಆರ್.ಕಂಠಿ ಕಾಲೇಜ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಬಾರಿ ನ್ಯಾಕ್ ತಂಡ ಆಗಮಿಸಿ ಕಾಲೇಜಿಗೆ ಉತ್ತಮ ಗ್ರೇಡ್ ನೀಡಿದೆ. ನಾಲ್ಕನೇ ಬಾರಿಗೆ ಕಾಲೇಜ್ ನ್ಯಾಕ್ ಅಧ್ಯಯನಕ್ಕೆ ಒಳಪಡುತ್ತಿದ್ದು, ಮಹಾವಿದ್ಯಾಲಯಕ್ಕೆ ‘ಎ’ ಪ್ಲಸ್ ಸಿಗುವ ವಿಶ್ವಾಸವಿದೆ. ರಾಜಸ್ಥಾನದ ಕುಲಪತಿ ಡಾ. ಸುನೀತಾ ಮಿಶ್ರಾ ನೇತೃತ್ವದಲ್ಲಿ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ಬರಲಿದೆ. ತಂಡವು ಎರಡು ದಿನ ಮೌಲ್ಯಾಂಕನ ಪರಿಶೀಲನೆ ಮಾಡಲಿದೆ ಎಂದು ತಿಳಿಸಿದರು.

ಬವಿವ ಸಂಘದಲ್ಲಿ ರನ್ನ ನಾಡಿನ ಬೀಪ್ಸ್ ಸಿಬಿಎಸ್‌ಇ ದೆಹಲಿ ಮಾನ್ಯತೆ ಪಡೆದುಕೊಂಡಿದೆ. ಎಲ್‌ಕೆಜಿಯಿಂದ ಪದವಿ, ವೃತ್ತಿಪರ, ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ. 1999ರಲ್ಲಿ ಪದವಿ ಕಾಲೇಜ್ ಆರಂಭವಾದಾಗಿನಿಂದ ಗ್ರಾಮೀಣ ಹಾಗೂ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೈಟೆಕ್ ಸೌಲಭ್ಯ ಒದಗಿಸಿ ಲಿತಾಂಶ ಸುಧಾರಣೆಗೆ ಪ್ರಯತ್ನಿಸಲಾಗಿದೆ. 1,829 ವಿದ್ಯಾರ್ಥಿಗಳು ಸದ್ಯ ಅಧ್ಯಯನದಲ್ಲಿ ಕ್ರಿಯಾಶೀಲರಾಗಿದ್ದಾರೆ. ಅಲ್ಲದೆ, ನಮ್ಮ ಶ್ರೀದಾನಮ್ಮದೇವಿ ಮಹಿಳಾ ಕಾಲೇಜುಗಳಲ್ಲೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಭಾಗದ ಜತೆಗೆ ಎಂಬಿಎ ಆರಂಭಿಸಲಾಗಿದೆ ಎಂದರು.

ನುರಿತ ಪ್ರಾಧ್ಯಾಪಕರಿಂದ ಬೋಧನೆ, ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲಾಗುತ್ತಿದೆ. 2012ರಲ್ಲಿ ಸ್ನಾತಕೋತ್ತರ ಕೋರ್ಸ್, 2016ರಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭಿಸಲಾಗಿದೆ. ನಗರದ ಬವಿವ ಸಂಘದ 16.35 ಎಕರೆ ಜಮೀನಿನಲ್ಲಿ ಎಲ್ಲ ಹಂತದ ಶಾಲಾ ಕಾಲೇಜ್ ಆರಂಭಿಸಲಾಗಿದೆ. ವಸತಿ ನಿಲಯಗಳು, ಕ್ಯಾಂಟೀನ್, ರನ್ನ ಬಯಲು ರಂಗ ಮಂದಿರ, ಕ್ರೀಡಾಂಗಣ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ, ಸಂಹನ, ಕೌಶಲ ಬೆಳೆಸುವುದರೊಂದಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಲೈಂಗಿಕ ಕಿರುಕುಳ ನಿಗ್ರಹ ಘಟಕದಳ, ಶಿಸ್ತು ಪರಿಪಾಲನಾ ಸಮಿತಿ, ಸಾಂಸ್ಕೃತಿಕ ಚಟುವಟಿಕೆ, ಎಸ್ಸಿ, ಎಸ್‌ಟಿ ಸೆಲ್ ಮತ್ತಿತರ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರಬಸವ ಸೂಳಿಭಾವಿ, ಕಾಲೇಜ್ ಸಮಿತಿ ಸದಸ್ಯ ರವೀಂದ್ರ ಸಾವಳಗಿಮಠ, ವಿಶ್ರಾಂತ ಮಹಿಳಾ ವಿವಿ ಕುಲಪತಿ ಮೀನಾ ಚಂದಾವರಕರ, ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಂ. ಗಾಂವಕರ, ಪ್ರಾಚಾರ್ಯ ಎಸ್.ವಿ. ಜಿಗಬಡ್ಡಿ, ಸಂಯೋಜಕಿ ಎಸ್.ಎಸ್. ಬಿರಾದಾರ ಇದ್ದರು.