ಜಿಲ್ಲೆ

ಅಪ್ಪುವಿನ ಅಂತಿಮ ದರ್ಶನ ಪಡೆದು ಬಂದ ಬ್ಯಾಂಕ್‌ ಉದ್ಯೋಗಿ ಸಾವು: ನೇತ್ರ ದಾನ ಮಾಡಲು ಹೇಳಿ ಕಣ್ಮುಚ್ಚಿದ್ದರು

ಹಾಸನ: ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ ಇಂದಿಗೆ 11 ದಿನಗಳು ಕಳೆದರೂ ಅವರ ಅಭಿಮಾನಿಗಳಿಗೆ ಮಾತ್ರ ಅವರ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.

ಇದೀಗ ಹಾಸನದ ಇನ್ನೋರ್ವ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಎಚ್.ಟಿ.ರವಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಕಸಬಾ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ಹಾಗೂ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದರು. ಬೆಂಗಳೂರಿಗೆ ಬಂದು ಪುನೀತ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಬಂದ ಬಳಿಕ ಖಿನ್ನತೆಗೆ ಜಾರಿದ್ದ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಾವು ಇನ್ನು ಬದುಕುವುದಿಲ್ಲ ಎಂದು ತಿಳಿಯುತ್ತಲೇ ತಮ್ಮ ಕಣ್ಣುಗಳನ್ನು ಅಪ್ಪುವಿನಂತೆ ದಾನ ಮಾಡಿ ಎಂದು ಸಹೋದರ ಎಚ್.ಟಿ.ಕುಮಾರಸ್ವಾಮಿಗೆ ಸಾಯುವ ಮುನ್ನ ತಿಳಿಸಿ ಹೋಗಿದ್ದಾರೆ.

ಅವರ ಕೊನೆಯ ಆಸೆಯಂತೆ ಎರಡು ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಿದ್ದಾರೆ ಸಹೋದರ. ಬೇಲೂರಿನ ಹಿಂದೂ ರುದ್ರಭೂಮಿಯಲ್ಲಿ ನಡೆದ ರವಿ ಅವರ ಅಂತ್ಯಕ್ರಿಯೆ ಜರುಗಿದೆ.