ಜಿಲ್ಲೆ

ಪಿಎಸ್​ಐ ನೇಮಕಾತಿ ಗೋಲ್​ಮಾಲ್​: ಕಲಬುರಗಿ ದಂಪತಿ ಹೈದರಾಬಾದ್​ಗೆ ಎಸ್ಕೇಪ್​- ಜಾಮೀನು ನಕಾರ

ಕಲಬುರಗಿ: ಪಿಎಸ್​ಐ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದು, ತನಿಖೆ ಶುರುವಾಗುತ್ತಲೇ ಎಸ್ಕೇಪ್​ ಆಗಿದ್ದ ಅಭ್ಯರ್ಥಿ ಶಾಂತಿಬಾಯಿ ಮತ್ತು ಆಕೆಯ ಪತಿ ಬಸ್ಯಾನಾಯಕ ಇಬ್ಬರಿಗೂ ಕಲಬುರಗಿ ಕೋರ್ಟ್​ ಜಾಮೀನು ನಿರಾಕರಿಸಿದೆ.

ಶಾಂತಿಬಾಯಿ, ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ ಮೇಳಕುಂದಿ ಅವರ ಅಭ್ಯರ್ಥಿಯಾಗಿದ್ದರು. ಮೇಳಕುಂದಿ ಸಹಾಯದಿಂದ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದು ಶಾಂತಿಬಾಯಿ ಪಾಸಾಗಿದ್ದರು. ಅಕ್ರಮ ಹೊರಬರುತ್ತಿದ್ದಂತೆ ಪತಿ ಹಾಗೂ ಮಕ್ಕಳ ಜತೆ ತಲೆಮರೆಸಿಕೊಂಡಿದ್ದರು. ಇವರನ್ನು ಹೈದರಾಬಾದ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಣ ನೀಡಿ ಒಎಮ್‌ಆರ್ ಶೀಟ್​ನಲ್ಲಿ ನಕಲು ಮಾಡಿ ಪಿಎಸ್ಐನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನೇಮಕವಾಗಿದ್ದರು ಎಂಬ ಆರೋಪದಡಿ ಇವರನ್ನು ಬಂಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ತಮಗೆ ಜಾಮೀನು ನೀಡುವಂತೆ ಅವರು ಕಲಬುರಗಿಯ 3 ನೇ ಜೆಎಂಎಫ್‌ಸಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಿವಾಸ ಕೆ. ಅವರು ಜಾಮೀನು ನಿರಾಕರಿಸಿದ್ದಾರೆ.

545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಬೃಹತ್​ ಅಕ್ರಮ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಜಾಮೀನು ಸಲ್ಲಿಸಿರುವ ಯಾರೊಬ್ಬರಿಗೂ ಜಾಮೀನು ಸಿಗಲಿಲ್ಲ.