ಜಿಲ್ಲೆ

ಬಿಜೆಪಿ ಮುಖಂಡ ಪ್ರವೀಣ್​ ಹತ್ಯೆಗೆ ಇದೆಯೆ ಹಲಾಲ್ ನಂಟು? ಕೃತ್ಯಕ್ಕೂ ಮುನ್ನ ಆಗಿದ್ದೇನು?

suchetana

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಇವರ ಹತ್ಯೆಯ ಹಿಂದಿನ ಕಾರಣವನ್ನು ಪೊಲೀಸರು ಹುಡುಕುತ್ತಿದ್ದಾರೆ.

ಇದೀಗ ಈ ಕೊಲೆಗೆ ಹಲಾಲ್ ನಂಟು ಇದೆಯಾ ಎಂಬ ಸಂದೇಹವೊಂದು ನುಸುಳಿ ಬಂದಿದೆ. ಇದಕ್ಕೆ ಕಾರಣ, ಹತ್ಯೆಗೂ ಕೆಲ ದಿನಗಳ ಮುನ್ನ ನಡೆದಿರುವ ಘಟನೆಗಳು ಬೆಳಕಿಗೆ ಬಂದಿರುವುದು. ಅದೇನೆಂದರೆ, ಬೆಳ್ಳಾರೆಯಲ್ಲಿ‌ ಪ್ರವೀಣ್ ನೆಟ್ಟಾರ್ ಚಿಕನ್ ಸೆಂಟರ್ ನಡೆಸುತ್ತಿದ್ದರು. ಇವರ ಚಿಕನ್​ ಸೆಂಟರ್​ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಷಫೀಕ್ ತಂದೆ ಇಬ್ರಾಹಿಂ ಕೆಲಸಕ್ಕೆ ಇದ್ದರು.

ಮೂರು ತಿಂಗಳು ಕೆಲಸ ಮಾಡಿ ಆ ನಂತರ ಇಬ್ರಾಹಿಂ ಕೆಲಸ ಬಿಟ್ಟಿದ್ದರು. ಅವರು ಕೆಲಸ ಬಿಡಲು ಕಾರಣ, ಹಲಾಲ್ ಮತ್ತು ಜಟ್ಕಾ ಕಟ್ ವಿವಾದ ಎಂದು ತಿಳಿದುಬಂದಿದೆ. ಇವರಿಬ್ಬರ ನಡುವೆ ಆಗಿರುವ ಹಲಾಲ್​ ಮತ್ತು ಜಟ್ಕಾ ವಿವಾದ ಬೆಳೆದು ನಿಂತು ಇಬ್ರಾಹಿಂ ಕೆಲಸ ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.

ಈ ಘಟನೆ ನಡೆದ ಬಳಿಕ ಪ್ರವೀಣ್ ಕೊಲೆಯಾಗಿದ್ದು ಮಾತ್ರವಲ್ಲದೇ, ಈ ಕೊಲೆಯ ಪ್ರಮುಖ ಆರೋಪಿ ಸ್ಥಾನದಲ್ಲಿ ಇಬ್ರಾಹಿಂ ಅವರ ಮಗನೇ ಇರುವುದರಿಂದ ಇವರ ಹತ್ಯೆಗೂ ಹಲಾಲ್​ಗೂ ಸಂಬಂಧ ಇದೆಯೇ ಎಂಬ ಗುಮಾನಿ ಶುರುವಾಗಿದೆ.

ಈ ನಡುವೆ, ಹತ್ಯೆಯಲ್ಲಿ ಬಂಧಿತನಾದ ಆರೋಪಿ ಷಫೀಕ್​ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದಾರೆ. ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿರುವ ಅಡಿಕೆ ಅಂಗಡಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದ್ದು, ಗಲಾಟೆ ನಡೆಸಿದ್ದಾರೆ.

ಪೋಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಿದ್ದಾರೆ. ಈ ನಡುವೆ ಅಂಗಡಿಗೆ ಬೀಗ ಹಾಕಿ ಅಂಗಡಿ ಮಾಲೀಕರು ತೆರಳಿದ್ದಾರೆ. (ದಿಗ್ವಿಜಯ ನ್ಯೂಸ್​)