ಜಿಲ್ಲೆ

ರಾಜಕೀಯ ಪ್ರವೇಶದ ಕುರಿತು ನಾನು ಪ್ರಶ್ನಿಸಿಲ್ಲ, ನನ್ನ ಹೆಸರಲ್ಲಿ ನಕಲಿ ಖಾತೆ: ಯದುವೀರ್‌ ಸ್ಪಷ್ಟನೆ

ಮೈಸೂರು: ತಮ್ಮ ಟ್ವೀಟ್‌ನಲ್ಲಿ ಮೈಸೂರು ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ‘Should I join Politics?’ (ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೆ?) ಎಂದು ಪ್ರಶ್ನಿಸಿದ್ದಾರೆ ಎಂದು ಭಾರಿ ಸುದ್ದಿ ಬೆಳಗಿನಿಂದ ಹರಡುತ್ತಿದೆ.

ಇವರ ಹೆಸರಿನಲ್ಲಿ ಇರುವ ಟ್ವಿಟರ್‌ ಖಾತೆಯಲ್ಲಿ ಇಂಥದ್ದೊಂದು ಸಂದೇಶ ಹಾಕಲಾಗಿದ್ದು, ನಾನು ರಾಜಕೀಯ ಸೇರಲೆ ಬೇಡವೆ ಎಂಬ ಬಗ್ಗೆ ಬರೆಯಲಾಗಿದೆ. ಈ ಪ್ರಶ್ನೆಗೆ ಇದಾಗಲೇ ನೂರಾರು ಮಂದಿ ಕಮೆಂಟ್‌ ಹಾಕಿದ್ದಾರೆ. ಇವರ ಪೈಕಿ ಹೆಚ್ಚಿನವರು ರಾಜಕೀಯ ಹೊಲಸು ಆಗಿರುವ ಕಾರಣ, ಅದಕ್ಕೆ ಬರಬೇಡಿ ಎಂದಿದ್ದಾರೆ.

ಆದರೆ, ಇದೀಗ ಖುದ್ದು ಯದುವೀರ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಇದು ನನ್ನ ಟ್ವಿಟರ್‌ ಖಾತೆಯಲ್ಲ, ಬದಲಿಗೆ ನನ್ನ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಈ ಸಂದೇಶ ಹರಿಬಿಟ್ಟಿದ್ದಾರೆ. ದಯವಿಟ್ಟು ಅದನ್ನು ನಂಬಬೇಡಿ ಎಂದಿದ್ದಾರೆ.

ರಾಜಕೀಯಕ್ಕೆ ಬರಲೇ ಬೇಡವೆ ಎಂಬ ಬಗ್ಗೆ ಟ್ವಿಟರ್‌ನಲ್ಲಿ ಇರುವ ಫೋಟೋದ ಸ್ಕ್ರೀನ್‌ಷಾಟ್‌ ತೆಗೆದು ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿರುವ ಯದುವೀರ್‌ ಅವರು, ಇದನ್ನು ಯಾರೂ ಹಿಂಬಾಲಿಸಬೇಡಿ ಎಂದು ಬರೆದಿದ್ದಾರೆ.

ಆದರೆ ಅದೇ ಇನ್ನೊಂದೆಡೆ, ಇವರು ರಾಜಕೀಯಕ್ಕೆ ಸೇರುವ ಕುರಿತು ಕೇಳಿದ್ದಾರೆ ಎನ್ನಲಾದ ಪ್ರಶ್ನೆಗಳಿಗೆ ಕಮೆಂಟ್‌ಗಳ ಸುರಿಮಳೆಯೇ ಬರುತ್ತಿದೆ.