ಮೈಸೂರು: ವಿಶ್ವ ಯೋಗದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.
ಈ ಸಂಬಂಧ ಮೈಸೂರು ನಗರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದು ಈ ರೀತಿ ಇದೆ...
* ಸಾರ್ವಜನಿಕರು ಆಸೀನರಾದ ಸ್ಥಳದಲ್ಲಿ ನಿಂತುಕೊಳ್ಳುವುದು, ಅನಾವಶ್ಯಕವಾಗಿ ತಿರುಗಾಡುವುದು, ಕೂರುವುದು ಇತ್ಯಾದಿ ಮಾಡದೆ ತಮ್ಮ ಅಕ್ಕ ಪಕ್ಕ ಆಸೀನರಾದ ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು.
* ಮೊಬೈಲ್‌ಗೆ ಮಾತ್ರ ಅವಕಾಶವಿದ್ದು ಉಳಿದ ಯಾವುದೇ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳನ್ನು ಹೊಂದಲು ಅವಕಾಶ ಇರುವುದಿಲ್ಲ.
* ಕ್ಯಾಮೆರಾ , ವಿಡಿಯೋ ಕ್ಯಾಮೆರಾ , ಪವರ್ ಬ್ಯಾಂಕ್, ಇಯರ್ ಫೋನ್, ಹ್ಯಾಂಡ್ಸ್ ಫ್ರೀ ಇತ್ಯಾದಿಗಳಿಗೆ ಅನುಮತಿ ಇಲ್ಲ
* ಮೊಬೈಲ್ ಫೋನ್ ತರಲು ಅನುಮತಿ ಇದೆ ಆದ್ರೆ ಒಳಗೆ ಬರುವ ಮುನ್ನ ಫೋನ್ಗಳನ್ನು ಸ್ವಿಚ್ಛ್ ಆಫ್ ಮಾಡಬೇಕು
* ಜನರು ನೀರಿನ ಬಾಟಲ್, ಗಾಜಿನ ಬಾಟಲ್ ಬ್ಯಾಗ್, ವ್ಯಾನಿಟಿಬ್ಯಾಗ್, ಹರಿತವಾದ ವಸ್ತುಗಳು, ಯಾವುದೇ ರೀತಿಯ ಆಯುಧಗಳು, ಲೋಹದ ವಸ್ತುಗಳು ಹಾಗೂ ಇತರೆ ಯಾವುದೇ ರೀತಿಯ ವಸ್ತುಗಳನ್ನು ಹೊಂದಿರಬಾರದು.
* ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ/ಪ್ಲಾಗ್ ಕಾರ್ಡ್‌ಗಳಿಗೆ ಅನುಮತಿ ಇರುವುದಿಲ್ಲ.
* ಬೆಂಕಿ ಉತ್ಪತ್ತಿ ಮಾಡುವ ಬೆಂಕಿ ಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು.
* ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇದಿಸಿದೆ.
* ಕರ್ಕಶ ಶಬ್ದವನ್ನು ಮಾಡುವ ಸೀಟಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಿದೆ.
* ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗದಿಪಡಿಸಿರುವ ಸ್ಥಳದಲ್ಲೇ ನಿಲ್ಲಿಸಬೇಕು
* ಸಾರ್ವಜನಿಕರು ಗಣ್ಯವ್ಯಕ್ತಿಗಳು ಸಾಗುವ ಮಾರ್ಗದಲ್ಲಿ ಗುಂಪು ಸೇರದೆ ಹಾಗು ಮಾರ್ಗಕ್ಕೆ ಬಂದು ಅಡ್ಡಿಯುಂಟು ಮಾಡದಂತೆ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ದೂರದಿಂದಲೇ ವೀಕ್ಷಿಸತಕ್ಕದ್ದು.