ಜಿಲ್ಲೆ

ದಿಢೀರ್​ ಕುಸಿದು ಬಿತ್ತು ಅರಮನೆ ಗೋಡೆ; ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣ

suchetana

ಬಳ್ಳಾರಿ: ಜಗತ್ಪ್ರಸಿದ್ಧಿ ಹೊಂದಿರುವ ಹಂಪಿಯ ಅಳಿಯ ರಾಮರಾಯನ ಕೋಟೆಯ ಅರಮನೆ ಗೋಡೆ ದಿಢೀರ್ ಕುಸಿತಗೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ.

ಹೊಸಪೇಟೆ ತಾಲೂಕಿನ ಹಂಪಿ ಕಮಲ ಮಹಲ್‌ ಸ್ಮಾರಕದ ಸುತ್ತಲಿನ ಕೋಟೆಯ ಗೋಡೆ ಇದಾಗಿದ್ದು, ಒಂದು ಪಾರ್ಶ್ವ ಇಂದು ಬೆಳಗ್ಗೆ ಕುಸಿದು ಬಿದ್ದಿದೆ. ಇದರ ಶಬ್ದಕ್ಕೆ ಅಲ್ಲಿದ್ದವರೆಲ್ಲಾ ಹೆದರಿದ್ದು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಆದರೆ ಸಮೀಪದಲ್ಲಿ ಯಾರೂ ಇಲ್ಲದಿದ್ದ ಹಿನ್ನೆಲೆಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದರಿಂದ ಐತಿಹಾಸಿಕ ಸ್ಮಾರಕಗಳಿಗೂ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಗೋಡೆಗಳು ಕಲ್ಲುಗಳಿಂದ ನಿರ್ಮಿತವಾಗಿದ್ದು, ಶತಮಾನದಷ್ಟು ಹಳೆಯದಾಗಿವೆ.

ಕುಸಿದು ಬಿದ್ದಿರುವುದು ಹೊರಭಾಗದ ಗೋಡೆಯಾಗಿದ್ದರಿಂದ ಸ್ಮಾರಕಗಳಿಗೆ ಹಾನಿಯಾಗಿಲ್ಲ. ಅದೇ ಒಳಭಾಗದಲ್ಲಿ ಗೋಡೆ ಕುಸಿದಿದ್ದರೆ ಸ್ಮಾರಕಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು ಇತ್ತು. ಜತೆಗೆ ಗೋಡೆ ಕುಸಿತದ ಸಮಯದಲ್ಲಿ ಪ್ರವಾಸಿಗರು ಇರಲಿಲ್ಲ. ಆದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಮಲ್ ‌ಮಹಲ್ ಬಳಿ ಶೌಚಗೃಹದ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಇಲ್ಲಿಗೆ ಬರುತ್ತಿದ್ದ ವಾಹನ‌ ಮತ್ತು ಕಾಮಗಾರಿಯಿಂದ ಉಂಟಾದ ಕಂಪನ ಗೋಡೆ ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೋಟೆಯನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯನ್ನು ಆಗ್ರಹಿಸಿದ್ದಾರೆ. ಆದರೆ ಕುಸಿತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.