ಜಿಲ್ಲೆ

ಪುನೀತ್‌ ಎಲ್ಲ ಪ್ರಶಸ್ತಿಗೂ ಅರ್ಹರು: ಪದ್ಮಶ್ರೀ ಕೊಡಲು ಸಮ್ಮತಿ ಇದೆ- ಸಿಎಂ ಬೊಮ್ಮಾಯಿ ಹೇಳಿಕೆ

suchetana

ಮೈಸೂರು: ಅಕ್ಟೋಬರ್‌ 29ರಂದು ನಿಧನರಾದ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿರುವ ನಡುವೆಯೇ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಸರ್ಕಾರ ಸಮಯ ಸಂದರ್ಭ ನೋಡಿಕೊಂಡು ನಮ್ಮ ಪ್ರಸ್ತಾಪ ಸಿದ್ಧಪಡಿಸುತ್ತೇವೆ ಎಂದಿದ್ದಾರೆ.

ಪುನೀತ್‌ ಅವರಿಗೆ ಪದ್ಮಶ್ರೀ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್‌ ಕುರಿತು ಮೈಸೂರಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಪುನೀತ್ ರಾಜ್ ಕುಮಾರ್‌ಗೆ ಪದ್ಮಶ್ರೀ ನೀಡಲು ನಮ್ಮ ಸಮ್ಮತಿ ಕೂಡ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ. ಎಲ್ಲದಕ್ಕೂ ಒಂದು ನಿಯಮ‌ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ ಎಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದರು.

ಪುನೀತ್‌ ಅವರಿಗೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅನೇಕ ಮಂದಿ ಆಗ್ರಹಿಸಿದ್ದರು. ಆದರೆ ಮರಣೋತ್ತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇರದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಇದೀಗ ಪದ್ಮಶ್ರೀ ನೀಡಲು ಒತ್ತಾಯಗಳು ಕೇಳಿಬರುತ್ತಿವೆ.