ಕೋಲಾರ: ಬಹುಭಾಷಾ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಗೆ ವಿಶ್ವ ಕಂಬನಿ ಮಿಡಿದಿದ್ದು, ಗಾಯಕನ ನೆನಪು ಚಿರಕಾಲ ಉಳಿಯುವಂತಾಗಲು ನಗರಸಭೆ ಮತ್ತು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾವುದಾದರೊಂದು ರಸ್ತೆ ಅಥವಾ ವೃತ್ತಕ್ಕೆ ಎಸ್‌ಪಿಬಿ ಹೆಸರು ನಾಮಕರಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ನಗರದ ಗಾಂಧಿವನದಲ್ಲಿ ಮನ್ವಂತರ ಪ್ರಕಾಶನ, ಮನ್ವಂತರ ಜನ ಸೇವಾ ಟ್ರಸ್ಟ್ ಹಾಗೂ ಎಸ್‌ಪಿಬಿ ಅಭಿಮಾನಿಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಎಸ್‌ಪಿಬಿ ಅವರು ಕನ್ನಡಿಗರ ಅತ್ಯಂತ ಪ್ರೀತಿಯ ಗಾಯಕರಾಗಿದ್ದರು. ಜಿಲ್ಲೆಯಲ್ಲಿ ಅವರು ನೀಡಿದ ಸಂಗೀತ ರಸಸಂಜೆ ಕಾರ್ಯಕ್ರಮ ಎಂದಿಗೂ ಮರೆಯಲಾಗದ ಕಾರ್ಯಕ್ರಮ ಎಂದರು.
ಎಸ್‌ಪಿಬಿ ಅವರ ಹಾಡುಗಳನ್ನು ಕೇಳಿದರೆ ಎಂತಹ ಕಾಯಿಲೆ, ಒತ್ತಡಗಳಿದ್ದರೂ ಶಮನಗೊಳ್ಳುತ್ತಿತ್ತು. ಅವರ ಸ್ವರದಲ್ಲಿ ಮಾಂತ್ರಿಕ ಶಕ್ತಿ ಇತ್ತು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಅಭಿಮಾನಿಗಳ ಕೋರಿಕೆಯಂತೆ ಯೋಜನೆ ರೂಪಿಸುವುದಕ್ಕೆ ನಾಳೆಯಿಂದಲೇ ಕಾರ್ಯೋನ್ಮುಖನಾಗುತ್ತೇನೆ ಎಂದರು.
ಕೋಲಾರ ಕ್ರೀಡಾ ಅಕಾಡೆಮಿ ಖಜಾಂಚಿ ಕುರುಬರಪೇಟೆ ವೆಂಕಟೇಶ್ ಮಾತನಾಡಿ, ಎಸ್‌ಪಿಬಿ ಅವರಲ್ಲಿ ಸುಮಧುರವಾದ ಕಂಠದ ಜತೆಗೆ ಒಳ್ಳೆಯ ವ್ಯಕ್ತಿತ್ವ ಇದ್ದುದರಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೋಲಾರದಲ್ಲಿ ಕಾರ್ಯಕ್ರಮ ನೀಡಲು ಅತ್ಯಂತ ಸಂತೋಷದಿಂದ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ನಗರಸಭೆ ಕಂದಾಯ ನಿರೀಕ್ಷಕ ತ್ಯಾಗರಾಜ್ ಮಾತನಾಡಿ, ಅಭಿಮಾನಿಗಳ ಒತ್ತಾಸೆಯನ್ನು ಪೌರಾಯುಕ್ತರ ಗಮನಕ್ಕೆ ತರುವುದಾಗಿ ನುಡಿದರಲ್ಲದೆ ಕನ್ನಡದ ಬಗ್ಗೆ ಅವರಲ್ಲಿದ್ದ ಅಭಿಮಾನ ಆದರ್ಶನೀಯ ಎಂದು ಎಸ್‌ಪಿಬಿ ಹಾಡಿರುವ ಕನ್ನಡದ ಗೀತೆ ಹಾಡುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.
ಮನ್ವಂತರ ಪ್ರಕಾಶನದ ಮಾರ್ಗದರ್ಶಕ, ಗಾಯಕ ಎಚ್.ಎ. ಪುರುಷೋತ್ತಮ್ ಎಸ್‌ಪಿಬಿ ಅವರ ಹಾಡುಗಳು ಸದಾ ನಮ್ಮೊಂದಿಗೆ ಇರುತ್ತವೆ ಎಂದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಸವಿತಾ ಸಮಾಜದ ಮುಖಂಡ ಎಸ್.ಮಂಜುನಾಥ್ ಹಾಗೂ ಗಾಯಕಿ ಕೊಂಡರಾಜನಹಳ್ಳಿ ಮಂಜುಳಾ ನುಡಿ ನಮನ ಸಲ್ಲಿಸಿದರು.
ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ. ಅನಂತರಾಮ್, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್, ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರಭಾವತಿ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್‌ರಾವ್, ಮನ್ವಂತರ ಜನಸೇವಾ ಟ್ರಸ್ಟ್ ಖಜಾಂಚಿ ಎಸ್.ಎನ್. ಪ್ರಕಾಶ್, ವೀರಶೈವ ಸಮಾಜದ ರಾಜಶೇಖರ್, ರೈತ ಸಂಘದ ಮುಖಂಡರಾದ ಕೆ.ನಾರಾರಾಣಗೌಡ, ಜಿ. ನಾರಾಯಣಸ್ವಾಮಿ, ಮನ್ವಂತರ ಪರಿಸರ ಪಡೆಯ ಸಂಚಾಲಕ ಎ. ಬಾಲನ್, ನಗರಸಭೆಯ ಕಂದಾಯ ಅಧಿಕಾರಿ ಚಂದ್ರು, ಬಯಲುಬಸವೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯ ಸಚ್ಚಿದಾನಂದ, ಕಾಂಗ್ರೆಸ್ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಇತರರಿದ್ದರು.