ಜಿಲ್ಲೆ

ಬೆಂಗಳೂರಿನ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವಕ್ಕೆ ಭಾರಿ ಹಿನ್ನಡೆ: ಎರಡೇ ಗಂಟೆಗಳಲ್ಲಿ ಸುಪ್ರೀಂನಿಂದ ಬಂತು ಈ ರೀತಿ ತೀರ್ಪು

suchetana

ಬೆಂಗಳೂರು: ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಕುರಿತು ಭಾರಿ ವಿವಾದ ಎದ್ದಿರುವ ಬೆನ್ನಲ್ಲೇ, ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು ಬಂದಿದೆ.

ಗಣೇಶೋತ್ಸವ ಆಚರಣೆಗೆ ಸುಪ್ರೀಂಕೋರ್ಟ್​ನ ತ್ರಿಸದಸ್ಯಪೀಠ ಅನುಮತಿಯನ್ನು ನೀಡಲಿಲ್ಲ. ಸುದೀರ್ಘ ಎರಡು ಗಂಟೆಗಳ ವಾದ ಪ್ರತಿವಾದನವನ್ನು ಆಲಿಸಿದ ನ್ಯಾಯಮೂರ್ತಿಗಳು, ಗಣೇಶೋತ್ಸವ ಆಚರಣೆಗೆ ಅನುಮತಿ ನಿರಾಕರಿಸಿತು. ಎರಡೂ ಬದಿಯ ಕಕ್ಷಿದಾರರಿಗೆ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿರಲಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಆದರೆ, ಮರುದಿನವೇ ಹೈಕೋರ್ಟ್‌ ವಿಭಾಗೀಯ ಪೀಠವು ಯಾರು ಯಾವ ಆಚರಣೆಯನ್ನಾದರೂ ಮಾಡಬಹುದು ಎಂದು ತೀರ್ಪು ನೀಡಿತು. ಇದನ್ನು ವಕ್ಫ್​ ಬೋರ್ಡ್​ ಪ್ರಶ್ನಿಸಿತ್ತು.

ಇಂದು ಬೆಳಗ್ಗೆ ಈ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಹೈಕೋರ್ಟ್​ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಓರ್ವ ನ್ಯಾಯಮೂರ್ತಿ ಹೈಕೋರ್ಟ್​ ತೀರ್ಪಿನ ಪರವಾಗಿ ಇದ್ದರೆ ಇನ್ನೋರ್ವ ನ್ಯಾಯಮೂರ್ತಿ ಹೈಕೋರ್ಟ್​ ತೀರ್ಪಿನ ವಿರುದ್ಧವಾಗಿ ತೀರ್ಪು ನೀಡಿದರು.

ಈ ಹಿನ್ನೆಲೆಯಲ್ಲಿ ಇದನ್ನು ಮೂವರು ನ್ಯಾಯಮೂರ್ತಿಗಳು ಇರುವ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಒಂದೇ ಗಂಟೆಯ ಒಳಗೆ ಮುಖ್ಯನ್ಯಾಯಮೂರ್ತಿಗಳು ತ್ರಿಸದಸ್ಯರ ಪೀಠವನ್ನು ರಚನೆ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎ.ಎಸ್​.ಓಕಾ, ಎಂ.ಎಂ.ಸುಂದರೇಶ್​ ಅವರು ಅರ್ಜಿಯ ವಿಚಾರಣೆ ನಡೆಸಿದರು. ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್​ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿ ಇಲ್ಲದಂತಾಗಿದೆ. (ಏಜೆನ್ಸೀಸ್​)