ಜಿಲ್ಲೆ

ಚರ್ಚಿಸಲು ಅವಕಾಶ ನೀಡುತ್ತಿಲ್ಲವೆಂದು ಸಭೆ ಬಹಿಷ್ಕರಿಸಿ ಹೊರನಡೆದ ಶಾಸಕ ನಾರಾಯಣಸ್ವಾಮಿ

Kolar

ಕೋಲಾರ: ಕರೊನಾ ಸೋಕು ಹರಡುವಿಕೆ ನಿಯಂತ್ರಣ ಸಂಬಂಧ ಸಭೆಯಲ್ಲಿ ಚರ್ಚಿಸಲು ಅವಕಾಶ ನೀಡುತ್ತಿಲ್ಲವೆಂದು ಕೋಪಗೊಂಡ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಭೆ ಬಹಿಷ್ಕರಿಸಿದ ಘಟನೆ ಬುಧವಾರ ನಡೆದಿದೆ.

ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕರೊನಾ ನಿಯಂತ್ರಣ ಸಂಬಂಧ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಆರೋಗ್ಯ ಉಪಕರಣ ಬಂದಿರುವ ಬಗ್ಗೆ ಆರೋಗ್ಯ ಇಲಾಖೆ ನೀಡುವ ಮಾಹಿತಿಗೂ ವಾಸ್ತವಾಂಶಕ್ಕೂ ತಾಳೆಯಾಗುತ್ತಿಲ್ಲ ಎಂದು ಶಾಸಕ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಹತ್ತಾರು ನಿಮಿಷ ಶಾಸಕರು ಈ ವಿಚಾರವಾಗಿಯೇ ಚರ್ಚಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಶಾಸಕ ಕೆ.ಆರ್. ರಮೇಶ್‌ಕುಮಾರ್, ಸಾಕು, ಸುಮ್ಮನಿರಿ, ಬೇರೆ ವಿಷಯ ಚರ್ಚಿಸೋಣ ಎನ್ನುತ್ತಿದ್ದಂತೆ ಸಿಟ್ಟಾದ ನಾರಾಯಣಸ್ವಾಮಿ ವಿಷಯದ ಬಗ್ಗೆ ಚರ್ಚಿಸಲೂ ಅವಕಾಶ ನೀಡುತ್ತಿಲ್ಲ ಎಂದರೆ ನಮ್ಮ ಅಗತ್ಯವೇನಿದೆ ? ಸಭೆ ಬಹಿಷ್ಕರಿಸುತ್ತೇನೆ ಎಂದು ಹೇಳಿ ಸಭಾಂಗಣದಿಂದ ನಿರ್ಗಮಿಸಿದರು.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ನಾರಾಯಣಸ್ವಾಮಿ, ಶಾಸಕ ರಮೇಶ್‌ಕುಮಾರ್ ಬಗ್ಗೆ ಗೌರವವಿದೆ. ಯಾರ ಓಲೈಕೆ ಮಾಡುವ ಅಗತ್ಯ ನನಗಿಲ್ಲ. ಪಕ್ಷಕ್ಕಿಂತ ನನಗೆ ಕ್ಷೇತ್ರದ ಜನತೆಯ ಹಿತ ಮುಖ್ಯ ಎಂದರು.

ಕರೆದು ಮಾತನಾಡುತ್ತೇನೆ: ನಾರಾಯಣಸ್ವಾಮಿ ಅನವಶ್ಯಕವಾಗಿ ಸಿಟ್ಟುಮಾಡಿಕೊಂಡು ಸಭೆಯಿಂದ ಹೊರಗೆ ಹೋಗಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇನೆ, ವಯಸ್ಸಿನಲ್ಲಿ ಹಿರಿಯನೆಂಬ ಕಾರಣಕ್ಕೆ ನಾನೇ ಮುಂದಾಳತ್ವ ವಹಿಸಿಕೊಂಡು ಸಭೆ ಮುನ್ನಡೆಸಿದ್ದೇನೆ ಎಂದು ರಮೇಶ್‌ಕುಮಾರ್ ನುಡಿದರು.