ಮೈಸೂರು: ದುಡ್ಡಿನ ದಾಹ ಮನುಷ್ಯನನ್ನು ಎಷ್ಟು ನೀಚ ಕೃತ್ಯಕ್ಕೂ ಇಳಿಸಬಲ್ಲುದು ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿ. ಮನೆಯ ಸೊಸೆ ಎಷ್ಟು ದುಡ್ಡುತಂದರೂ ಸಾಲದೇ ಇನ್ನಷ್ಟು ದುಡ್ಡಿಗಾಗಿ ಹಪಹಪಿಸಿದ ಕುಟುಂಬವೊಂದು ಆಕೆಯನ್ನು ಸುಟ್ಟುಹಾಕಿ ಭೀಕರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಸುನೀತಾ ಎಂಬ ಯುವತಿ ಗಂಡನ ಮನೆಯವರ ಹಣದ ದಾಹಕ್ಕೆ ಬಲಿಯಾಗಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ತಗುಲಿ ಮೃತಪಟ್ಟಿರುವುದಾಗಿ ಕುಟುಂಬದವರು ಸುನೀತಾಳ ಮನೆಯವರನ್ನು ನಂಬಿಸಲೂ ಯಶಸ್ವಿಯಾಗಿಬಿಟ್ಟಿದ್ದರು. ಈ ಸಂಬಂಧ ಇದು ಸಹಜ ಸಾವು ಎಂದು ಪೊಲೀಸ್ ಠಾಣೆಯಲ್ಲಿ ದಾಖಲು ಕೂಡ ಆಯಿತು.
ಆದರೆ ಗಂಡನ ಮನೆಯವರ ಭಯಾನಕ ರೂಪ ಬೆಳಕಿಗೆ ಬಂದದ್ದು ಸಾಯುವ ಮುನ್ನ ಯಾರಿಗೂ ತಿಳಿಯದೇ ಸುನೀತಾ ಮಾಡಿದ್ದ ವಾಯ್ಸ್ ರಿಕಾರ್ಡಿಂಗ್!
ಏನಿದು ಘಟನೆ?
ಕೃಷಿ ಕುಟುಂಬದ ಸುನೀತಾರನ್ನು 2020ರ ಮಾರ್ಚ್ 15ರಂದು ಪಿರಿಯಾಪಟ್ಟಣದ ಹಿಡ್ನಳ್ಳಿ ಗ್ರಾಮದ ಮಂಜು ರಾಜಪ್ಪ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಈತನ ಕುಟುಂಬದವರು ಸುನೀತಾ ಮನೆಯವರಿಗೆ ಮೊದಲಿನಿಂದ ಪರಿಚಯ. ಮದುವೆಯ ಸಮಯದಲ್ಲಿ ಸುನೀತಾ ಮನೆಯವರು 20 ಗ್ರಾಮ ಚಿನ್ನ, ಮೂರುವರೆ ಲಕ್ಷ ನಗದು ಕೊಟ್ಟಿದ್ದು ಮಾತ್ರವಲ್ಲದೇ ಮದುವೆಯ ಖರ್ಚನ್ನೂ ಮಾಡಿಕೊಟ್ಟಿದ್ದರು.
ಆದರೆ ಈ ಧನದಾಹಿಗಳು ಅಷ್ಟಕ್ಕೇ ತೃಪ್ತರಾಗಿಲ್ಲ. ಮನೆ ಕಟ್ಟಿಸಬೇಕಿದ್ದು, ಅದಕ್ಕೆ ಇನ್ನಷ್ಟು ಹಣ ನೀಡುವಂತೆ ಸುನೀತಾಗೆ ಗಂಡನ ಮನೆಯವರು ಕಿರುಕುಳ ಕೊಡಲು ಆರಂಭಿಸಿದರು. ಮಗಳ ನೋವನ್ನು ನೋಡಲಾಗದ ಸುನೀತಾ ತಾಯಿ, ಹಣ ಕೊಡುವುದಾಗಿ ಒಪ್ಪಿಕೊಂಡರು. ಆದರೆ ಕೃಷಿ ಕೈಕೊಟ್ಟಿತ್ತು. ಬೆಳೆ ಚೆನ್ನಾಗಿ ಬಂದಿರಲಿಲ್ಲ. ಆದ್ದರಿಂದ ಹಣ ಕೊಡುವುದು ಸುನೀತಾ ತವರಿನವರಿಗೆ ಸಾಧ್ಯವಾಗಲಿಲ್ಲ.
ಇದನ್ನೇ ಮುಂದುಮಾಡಿಕೊಂಡು ಸುನೀತಾಗೆ ಕೊಡಬಾರದ ಕಷ್ಟಕೊಟ್ಟರು ಗಂಡ, ಅತ್ತೆ ಶಿವಮ್ಮ ಹಾಗೂ ಮಾವ ರಾಜಪ್ಪ. ಆದರೆ ಈ ಬಗ್ಗೆ ಸುನೀತಾ ತವರಿನವರಿಗೆ ತಿಳಿಯಲೇ ಇಲ್ಲ.
ಈ ನಡುವೆಯೇ ಅಡುಗೆ ಮಾಡುವಾಗ ಬೆಂಕಿ ತಗುಲಿ ಸುನೀತಾ ಮೃತಪಟ್ಟಿರುವ ಸುದ್ದಿಯನ್ನು ಆಕೆಯ ಗಂಡನ ಮನೆಯವರು ತವರಿನವರಿಗೆ ತಿಳಿಸಿದರು.
ಸುನೀತಾ ಬೆಂಕಿಯಲ್ಲಿ ದಹಿಸಿ ಹೋಗಿದ್ದಳು. ಆಕೆಯ ಗಂಡನ ಮನೆಯವರ ಮಾತನ್ನು ಇವರೂ ನಂಬಿಬಿಟ್ಟರು. ಇದು ಸಹಜ ಸಾವು ಎಂದು ದಾಖಲಾಯಿತು
.ಆದರೆ ಇನ್ನೇನು ತಾವು ಗೆದ್ದೇ ಬಿಟ್ಟೆವು ಎಂದು ಅಂದುಕೊಳ್ಳುತ್ತಿರುವಾಗಲೇ ಸುನೀತಾ ತಮ್ಮ ಪಕ್ಕದ ಮನೆಯ ವ್ಯಕ್ತಿಯೊಬ್ಬರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ ವಾಯ್ಸ ರಿಕಾರ್ಡ್ ಸುನೀತಾ ತಮ್ಮನಿಗೆ ಸಿಕ್ಕಿತು. ಆದರಲ್ಲಿ ಆಕೆ ತನಗೆ ಅತ್ತೆ ಮನೆಯವರು ಕೊಡುತ್ತಿರುವ ಚಿತ್ರಹಿಂಸೆಯ ಬಗ್ಗೆ ಹೇಳಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ. ನನಗೆ ಏನಾದರೂ ತೊಂದರೆ ಆದರೆ ಅದಕ್ಕೆ ನನ್ನ ಗಂಡ, ಅತ್ತೆ, ಮಾವನೇ ಕಾರಣ, ನನ್ನನ್ನು ಅವರು ಏನು ಮಾಡುತ್ತಾರೆ ಗೊತ್ತಿಲ್ಲ. ತುಂಬಾ ಕಿರುಕುಳ ಕೊಡುತ್ತಿದ್ದಾರೆ ನನಗೆ ಏನಾದರೂ ಆದರೆ ಈ ಮೂವರನ್ನೂ ಜೈಲಿಗೆ ಕಳುಹಿಸಿ ಎಂದು ಹೇಳಿದ್ದರು.
ಇದನ್ನೇ ಸಾಕ್ಷ್ಯ ಮಾಡಿಕೊಂಡು ಇದೀಗ ಅವರ ಸಹೋದರ ಸುನೀಲ್ ಕುಮಾರ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.