ಜಿಲ್ಲೆ

ವಿದ್ಯಾರ್ಥಿಗಳು, ಬೋಧಕರ ಸಾಮರ್ಥ್ಯ ವೃದ್ಧಿಗೆ ನೂತನ ಯೋಜನೆ- ಇನ್ಫೋಸಿಸ್ ಜತೆ ಒಪ್ಪಂದ: ಏನೇನಿದೆ ಇದರಲ್ಲಿ?

suchetana

ಬೆಂಗಳೂರು: ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು, ಬೋಧಕರ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಉದ್ದೇಶದಿಂದ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯು ಇನ್ಫೋಸಿಸ್ ಸಂಸ್ಥೆಯ ಜತೆಗೆ ಮೂರು ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ಶಿಕ್ಷಣಕ್ಕೆ ನೆರವು ಉಪಕ್ರಮ ಹಾಗೂ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ಈ ಒಪ್ಪಂದ ಏರ್ಪಟ್ಟಿದ್ದು, ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮಕ್ಷಮ ಇಲಾಖೆ ಆಯುಕ್ತ ಪಿ.ಪ್ರದೀಪ್, ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಸಹಿ ಹಾಕಿ, ಕಡತವನ್ನು ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ರಾಜೇಂದ್ರ ರಾಯನ್ ತಿಳಿವಳಿಕೆ ಪತ್ರ ರುಜು ಹಾಕಿ ಕಡತ ವಿನಿಮಯ ಮಾಡಿಕೊಂಡರು

ಒಪ್ಪಂದಗಳು

* ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಇನ್ಫೋಸಿಸ್‌ನ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆ ಬಳಕೆಗೆ ಅವಕಾಶ.

* ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಶಿಕ್ಷಕರಿಗೆ ತರಬೇತಿ, ವರ್ಚುವಲ್ ವೇದಿಕೆ ಮೂಲಕವು ವೃತ್ತಿ ಮಾರ್ಗದರ್ಶನ ಹಾಗೂ 15,000 ಡಿ-ಬಾಂಡೆಡ್ ಕಂಪ್ಯೂಟರ್ ಗಳ ಕೊಡುಗೆ ನೀಡಲಿದೆ.

* ಈ ಕಂಪ್ಯೂಟರ್ ಗಳಿಗೆ ಬೇಕಾದ ಸಾಫ್ಟ್‌ವೇರ್ ಅಳವಡಿಕೆ‌ ಹಾಗೂ ಕಾಲೇಜುಗಳಿಗೆ ಸಾಗಣೆ ಜವಾಬ್ದಾರಿಯನ್ನು ರೋಟರಿ ಸಂಸ್ಥೆ ನಿರ್ವಹಿಸಲಿದೆ.

* ಈ ಒಡಂಬಡಿಕೆಯಿಂದ 75000ಕ್ಕೂ ಹೆಚ್ಚು ಪಾಲಿಟೆಕ್ನಿಕ್, 15,000 ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕೌಶಲಪೂರ್ಣ ಉದ್ಯೋಗಿಗಳ ಪೂರೈಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇರಬೇಕೆಂಬ ಸರ್ಕಾರದ ಒತ್ತಾಸೆಗೆ ಇಂಬು ನೀಡಿದಂತಾಗಿದೆ ಎಂದು ಅಶ್ವತ್ಥ ನಾರಾಯಣ ಹರ್ಷ ವ್ಯಕ್ತಪಡಿಸಿದರು.