ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಮ್ಮ ಮೆಟ್ರೋ ರೈಲಿನ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿತ್ತು. ಇದ್ದಕ್ಕಿದ್ದಂತೆಯೇ ಕಾಮಗಾರಿ ಜಾಗದಲ್ಲಿ ಭೂಕುಸಿತ ಉಂಟಾಗಿ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಇನ್ನೊಂದು ಅವಘಡ ಸಂಭವಿಸಿದೆ.
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ನಡೆಯುತ್ತಿರುವ ಕಾಮಗಾರಿ ವೇಳೆ ಈ ದುರ್ಘಟನೆ ಸಂಭವಿಸಿದೆ. ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ, ಸಮೀಪ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ.
ಸಿಲ್ಕ್ ಬೋರ್ಡ್, ಕೆ ಆರ್ ಪುರ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಈ ಘಟನೆ ನಡೆದಿದೆ. ‘ನಮ್ಮ ಮೆಟ್ರೋ’ ಫೇಸ್ -2 ಕಾಮಗಾರಿ ವೇಳೆ ಈ ಘಟನೆ ನಡೆದಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಯಂತ್ರ ಅರ್ಧಕ್ಕೆ ತುಂಡಾಗಿ ಬಿದ್ದಿದೆ ಎಂದು ಆರೋಪಿಸಲಾಗಿದೆ.
ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಯಂತ್ರ ಆಯ ತಪ್ಪಿ ದಿಢೀರ್ ಕೆಳಗೆ ಬಿದ್ದಿದೆ. ಇದೀಗ ಯಂತ್ರವನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಈ ಘಟನೆ ಬೆಳಗ್ಗೆ 6:30ರ ಸುಮಾರಿಗೆ ನಡೆದಿದೆ ಎಂದು ಮೆಟ್ರೊ ಸಿಬ್ಬಂದಿ ಹೇಳಿದ್ದಾರೆ.