ಬೆಂಗಳೂರು: ಮೆಟ್ರೋ ರೈಲು ಸಂಚಾರವಿಲ್ಲದೇ ಕಳೆದ ಐದಾರು ತಿಂಗಳಿನಿಂದ ಪರದಾಡುತ್ತಿರುವ ಬೆಂಗಳೂರಿಗರು ಅದೆಷ್ಟೋ ಮಂದಿ.
ರೈಲು ಯಾವಾಗ ಆರಂಭವಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದವರಿಗೆ ಇದಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾಹಿತಿ ನೀಡಿದ್ದು, ಕೋವಿಡ್ ಅನ್‌ಲಾಕ್‌ನಿಂದಾಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದ್ದು ಶೀಘ್ರದಲ್ಲೇ ಮೆಟ್ರೋ ಸೇವೆ ಆರಂಭ ಮಾಡಲಾಗುವುದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು ರಾಜ್ಯದಲ್ಲಿ ಹಂತ ಹಂತವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಮುಂಜಾಗರೂಕತಾ ಕ್ರಮ ಕೈಗೊಂಡು ಶೀಘ್ರದಲ್ಲೇ ಮೆಟ್ರೋ ಸೇವೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಇದರ ಬೆನ್ನಲ್ಲೇ 'ನಮ್ಮ ಮೆಟ್ರೊ' ಎರಡನೆಯ ಹಂತದ ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ ಇಂದು ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರ ನಡೆಸಲಾಯಿತು.
ಈ ಪರೀಕ್ಷಾರ್ಥ ಸಂಚಾರ ಇನ್ನೂ 30 ದಿನಗಳು ಇರಲಿವೆ. '30 ದಿನಗಳು ಪರೀಕ್ಷಾರ್ಥ ಸಂಚಾರ ನಡೆಯಲಿದೆ. ವೇಗ ಮತ್ತು ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರೀಕ್ಷಿಸಲಾಗುವುದು' ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.