ಜಿಲ್ಲೆ

ಕರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಏನೇನಾಗಬಹುದು? ಮೂರು ದಿನಗಳಲ್ಲಿ ಸರ್ಕಾರದಿಂದ ಫೈನಲ್‌ ಯೋಜನೆ

ಬೆಂಗಳೂರು: ದೇಶವ್ಯಾಪಿ ಕರೊನಾ ಸೋಂಕಿನ ಬೆಳವಣಿಗೆ ಎಲ್ಲರ ಗಮನಕ್ಕಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದ್ದು, ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ನೆಲೆಯಲ್ಲಿ ಏನೆಲ್ಲ ಕ್ರಮವಹಿಸಬೇಕು ಎಂಬ ಚಿಂತನೆ ನಡೆದಿದೆ. ಕರೊನಾ ನಿಯಂತ್ರಿಸಬೇಕು, ಜನ ಜೀವನಕ್ಕೂ ತೊಂದರೆಯಾಗಬಾರದು. ಅಂತಹ ದೀರ್ಘಾವಧಿ ಕ್ರಮಗಳ ಸಲಹೆಗಳನ್ನು ನೀಡಬೇಕೆಂದು ತಾಂತ್ರಿಕ ತಜ್ಞರ ಸಲಹಾ ಸಮಿತಿಗೆ ಸೂಚಿಸಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ವಸ್ತುಸ್ಥಿತಿ ಅಧ್ಯಯನ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರೊಂದಿಗೆ ಮಂಗಳವಾರ ಸಂಜೆ ಚರ್ಚಿಸಲು ನಿರ್ಧರಿಸಿರುವೆ ಎಂದರು.

ಗುರುವಾರ ಫೈನಲ್
ತಜ್ಞರ ಜತೆಗೆ ಚರ್ಚಿಸಿದ ಬಳಿಕ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದೀರ್ಘಾವಧಿ ಕ್ರಮಗಳು, ನಿರ್ಬಂಧಗಳು ಕುರಿತು ಸುದೀರ್ಘವಾಗಿ ಚರ್ಚಿಸಿ ಫೈನಲ್ ಮಾಡಲಾಗುವುದು ಎಂದು ಬೊಮ್ಮಾಯಿ‌ ತಿಳಿಸಿದರು.

ಮೇಕೆದಾಟು ಪಾದಯಾತ್ರೆ ಸಂಬಂಧ ಕಾಂಗ್ರೆಸ್ ನವರು ಏನಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನೋಡೋಣ. ಕರೊನಾ ಹತೋಟಿಗಾಗಿ ಜಾರಿಯಾಗಲಿರುವ ಕ್ರಮಗಳು ಸಾರ್ವತ್ರಿಕವಾಗಿ ಇರುತ್ತವೆಯೋ ಹೊರತು ಯಾವುದೇ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮದ ವಿರುದ್ಧವಲ್ಲ. ಕರೊನಾ ನಿಯಂತ್ರಣಕ್ಕೆ ಗುರುವಾರ ಕೈಗೊಳ್ಳಲಿರುವ ನಿರ್ಧಾರಗಳು ಸಾರ್ವಜನಿಕರ ಜತೆಗೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ ಎಂದು ಸಿಎಂ ಬೊಮ್ಮಾಯಿ‌ ಸ್ಪಷ್ಟಪಡಿಸಿದರು.