ಬೆಂಗಳೂರು: ಯಾವುದೇ ವಾಹನಗಳನ್ನು ಚಲಾಯಿಸಬೇಕಾದರೂ ಮಾಸ್ಕ್ ಧರಿಸುವುದು ಇಲ್ಲಿಯವರೆಗೆ ಕಡ್ಡಾಯವಾಗಿತ್ತು. ಒಂದು ವೇಳೆ ಮಾಸ್ಕ್ ಧರಿಸದೇ ಹೋದರೆ ಭಾರಿ ಪ್ರಮಾಣದ ದಂಡ ಬೀಳುತ್ತಿತ್ತು.
ಇದೀಗ ವಾಹನ ಸವಾರರು ಕೊಂಚ ನಿರಾಳ ಎನ್ನುವಂಥ ಆದೇಶವೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದೆ. ಈ ಹೊಸ ಆದೇಶ ಬೆಂಗಳೂರು ನಗರಿಗರಿಗೆ ಅನ್ವಯ ಆಗಲಿದೆ.
ಈ ಹೊಸ ರೂಲ್ಸ್ ಪ್ರಕಾರ, ಬೈಕ್ ಮತ್ತು ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಮಾಸ್ಕ್ ಇನ್ಮುಂದೆ ಕಡ್ಡಾಯವಿಲ್ಲ. ಆದರೆ ಹಿಂಬದಿ ಸವಾರ ಮತ್ತು ಕಾರಿನಲ್ಲಿ ಇತರ ಪ್ರಯಾಣಿಕರಿದ್ದಾಗ ಮಾತ್ರ ಮಾಸ್ಕ್ ಅಳವಡಿಸಿಕೊಳ್ಳಬೇಕು.
ಮಾಸ್ಕ್ ಅಳವಡಿಕೆ ನೀತಿಯನ್ನು ಸಡಿಲಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದೆ. ಒಂಟಿಯಾಗಿ ಪ್ರಯಾಣಿಸುವಾಗ ಮಾತ್ರ ಇದು ಅನ್ವಯ ಆಗಲಿದೆ. ಇದನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಅಂದರೆ ಹೆಚ್ಚು ಮಂದಿ ಪ್ರಯಾಣಿಸುವಾಗ ಮಾಸ್ಕ್ ಧರಿಸದೇ ಹೋದರೆ ದಂಡ ಕಟ್ಟಟ್ಟದ್ದೇ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಒಂದು ವೇಳೆ ವಾಹನ ಸವಾರರು ಒಂಟಿಯಾಗಿ ಪ್ರಯಾಣಿಸಿ ನಂತರ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದರೆ ಅಂಥವರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.