ಜಿಲ್ಲೆ

ಮಂಡ್ಯದಲ್ಲೊಂದು ಬೆಚ್ಚಿಬೀಳಿಸೋ ಘಟನೆ: ಬಾಗಿಲು ಒಡೆದಾಗ ಕಂಡದ್ದು ಮಗಳ ಕೊಳೆತ ಶವದೊಂದಿಗೆ ಕುಳಿತ ತಾಯಿ!

ಮಂಡ್ಯ : ಸುಮಾರು 10 ವರ್ಷಗಳ ಹಿಂದೆ ಮದುವೆಯಾಗಿ, ನಂತರ ಯಾವುದೋ ಕಾರಣಕ್ಕೆ ಗಂಡ, ಮಕ್ಕಳನ್ನು ತೊರೆದು ತವರು ಮನೆ ಸೇರಿದ ಮಹಿಳೆ ನಿಗೂಢವಾಗಿ ಮೃತಪಟ್ಟಿದ್ದು, ಆಕೆಯ ಶವದೊಂದಿಗೆ ತಾಯಿ ನಾಗಮ್ಮ ನಾಲ್ಕು ದಿನ ಕಳೆದಿರುವ ಬೆಚ್ಚಿಬೀಳೋ ಘಟನೆ ಮಂಡ್ಯದಲ್ಲಿ ನಡೆದಿದೆ.

ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರೂಪ ಎನ್ನುವ 30 ವರ್ಷ ಮಹಿಳೆ ನಿಗೂಢವಾಗಿ ಮೃತಪಟ್ಟಿದ್ದು, ಈ ವಿಷಯವನ್ನು ಯಾರಿಗೂ ತಿಳಿಸದ ತಾಯಿ ಆಕೆಯ ಜತೆಯಲ್ಲಿಯೇ ಮನೆಯಲ್ಲಿ ನೆಲೆಸಿದ್ದಾರೆ.

ಅಕ್ಕಪಕ್ಕದ ಮನೆಯವರಿಗೆ ದುರ್ನಾತ ಬರಲು ಶುರುವಾಗಿದೆ. ಹೆಗ್ಗಣನೋ ಇನ್ನೇನೋ ಸತ್ತಿರಬೇಕು ಎಂದು ಅಕ್ಕಪಕ್ಕದವರು ಎಲ್ಲೆಡೆ ಹುಡುಕಿದ್ದಾರೆ. ಆದರೆ ದುರ್ನಾತ ಮಾತ್ರ ಹೆಚ್ಚುತ್ತಲೇ ಹೋಗಿದೆ. ನಾಗಮ್ಮ ಅವರ ಮನೆಯ ಸಮೀಪ ಈ ದುರ್ನಾತ ಹೆಚ್ಚಿರುವುದು ಎಲ್ಲರ ಗಮನಕ್ಕೆ ಬಂದಿದೆ. ಆದರೆ ನಾಗಮ್ಮ ಮತ್ತು ಮಗಳು ರೂಪ ಮನೆಯಿಂದ ಹೊರಕ್ಕೆ ಬಾರದೇ ಮನೆಯ ಬಾಗಿಲು ಹಾಕಿಕೊಂಡೇ ಇದ್ದದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನಂತರ ಅವರ ಮನೆಯ ಬಾಗಿಲನ್ನು ಒಡೆಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ!

ಮಗಳು ರೂಪಾ ಶವದ ಜೊತೆ ನಾಗಮ್ಮ ಕುಳಿತಿದ್ದರು. ಇದನ್ನು ನೋಡಿದ ನೆರೆಹೊರೆಯವರು ಭಯದಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.

ಐದು ವರ್ಷಗಳ ಹಿಂದೆ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ತವರು ಸೇರಿದ್ದ ರೂಪಾ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ಯಾವುದೋ ಕಾರಣಕ್ಕೆ ಅಮಾನತು ಮಾಡಲಾಗಿತ್ತು. ತಾಯಿ-ಮಗಳ ಜತೆ ಪ್ರತಿನಿತ್ಯವೂ ಗಲಾಟೆಯಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಹೊರ ಬರಬೇಕಿದೆ.