ಜಿಲ್ಲೆ

ಮಾಲ್‌ ತೆರೆಯಲು ಸಿಗುತ್ತಾ ಅನುಮತಿ? ಮಾಲೀಕರ ಮನವಿಗೆ ಸಿಎಂ ನೀಡಿದ್ರು ಭರವಸೆ

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾಲ್‌ಗಳನ್ನು ಇದುವರೆಗೆ ತೆರೆಯಲು ಅನುಮತಿ ಇಲ್ಲದ ಕಾರಣ ನಷ್ಟ ಅನುಭವಿಸಿರುವ ಮಾಲೀಕರು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಾಲ್ ತೆರೆಯಲು ಅನುಮತಿ, ಆಸ್ತಿ ತೆರಿಗೆ, ಬಾಡಿಗೆ ಹಾಗೂ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮಾಲ್ ಅಸೋಸಿಯೇಷನ್ ಸದಸ್ಯರು ಮನವಿ ಸಲ್ಲಿಸಿದರು.

ಮಾಲ್ ಗಳನ್ನು ಜುಲೈ 5ರಿಂದ ತೆರೆಯಲು ಅನುಮತಿ ಕೋರಿ ಸಿಎಂಗೆ ಮನವಿ ಸಲ್ಲಿಸಿದ್ದು,ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಮಾಲ್ ಕಾಲಾವಕಾಶ ನಿಗದಿಪಡಿಸಿ, ಕರೊನಾ ನಿಯಮಾವಳಿ ಪಾಲನೆಗೆ ಬದ್ಧವೆಂದು ನಿವೇದಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಭೇಟಿ ಬಳಿಕ ಮಾಲ್ ಅಸೋಸಿಯೇಷನ್ ಸದಸ್ಯ ನಂದೀಶ್ ಮಾಹಿತಿ ನೀಡಿದ್ದಾರೆ.

ಲಾಕ್ ಡೌನ್‌ನಿಂದ ಪ್ರತಿ ಮಾಲ್ ಗೆ 2 - 3 ಕೋಟಿ ನಷ್ಟ ಆಗಿದೆ. ರಾಜ್ಯದಲ್ಲಿ ಒಟ್ಟು 84 ಮಾಲ್ ಇವೆ. ಮೂರು ಲಕ್ಷ ಸಿಬ್ಬಂದಿಗೆ ಕಷ್ಟ ಆಗಿದೆ. ಹೀಗಾಗಿ ನಿಗದಿತ ವಿದ್ಯುತ್ ಶುಲ್ಕ, ತೆರಿಗೆ ಮನ್ನಾ ಮಾಡುವಂತೆ ವಿನಂತಿಸಲಾಗಿದೆ ಎಂದು ಅವರ ಹೇಳಿದರು.

ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, 2-3 ದಿನಗಳ ಕಾಲಾವಕಾಶ ಕೊಡಿ, ಮಾಲ್ ಅಸೋಸಿಯೇಷನ್ ಸದಸ್ಯರನ್ನು ಕರೆದು ಚರ್ಚಿಸುವೆ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.