ಜಿಲ್ಲೆ

ಎಸ್‌.ಎಂ.ಕೃಷ್ಣ ವ್ಯಕ್ತಿತ್ವಕ್ಕೆ ಮಾರುಹೋದ ಮಂಗಳೂರು ಜನ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ಅಂದು ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ ವಿಮಾನ ವಿಳಂಬವಾಗಿತ್ತು. ಬಜ್ಪೆಯಲ್ಲಿದ್ದ ಹಳೇ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಅತ್ತಿಂದಿತ್ತ ಸುಮ್ಮನೆ ನಡೆಯುತ್ತಿದ್ದರು. ಯಾರಿಗಾದರೂ ಗೌರವ ಕೊಡಲೇ ಬೇಕೆನಿಸುವಂತಹ ಅವರ ವಿಶೇಷ ಲುಕ್, ಚುರುಕುತನ ಯಾರಿಗಾದರೂ ಅವರ ಬಳಿ ಸರಾಗವಾಗಿ ತೆರಳಿ ಮಾತನಾಡಿಸುವುದಕ್ಕೂ ಅಂಜುವಂತೆ ಮಾಡುತ್ತಿತ್ತು.

ಎಂಆರ್‌ಪಿಎಲ್ ಘಟಕದ ಉದ್ಘಾಟನೆಗೆ ಪ್ರಧಾನಿ ಬರಬೇಕಿತ್ತು. ಮಳೆ ಮತ್ತು ಮೋಡದ ಪ್ರತಿಕೂಲ ಹವಾಮಾನದಿಂದ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ನಾನೇ ಎಸ್.ಎಂ.ಕೃಷ್ಣ ಅವರ ಬಳಿ ತೆರಳಿ ತಿಳಿಸಿದೆ ಎಂದು ಅಂದು ವಿಮಾನ ನಿಲ್ದಾಣದ ನಿರ್ದೇಶಕನಾಗಿದ್ದ ಎಂ.ಆರ್.ವಾಸುದೇವ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ವಾಸ್ತವವಾಗಿ ಎಸ್.ಎಂ.ಕೃಷ್ಣ ಅವರು ಹಾಗೂ ಅವರ ಶ್ರೀಮತಿಯವರು ತುಂಬಾ ಸ್ನೇಹಶೀಲ ಮತ್ತು ಸರಳ ವ್ಯಕ್ತಿತ್ವವನ್ನು ಹೊಂದಿದವರು ಎನ್ನುವುದು ಅವರ ಜತೆ ಒಡನಾಟದ ಬಳಿಕ ವೇದ್ಯವಾಗುತ್ತದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಮಾನ ನಿಲ್ದಾಣದ ಪ್ರದೇಶ ವಿಸ್ತರಣೆ ಸಂದರ್ಭ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ಎಂ.ಆರ್.ವಾಸುದೇವ ಲಂಡನ್‌ನಿಂದ ದೂರವಾಣಿ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎಸ್.ಎಂ.ಕೃಷ್ಣ ಮತ್ತು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ವಿಮಾನ ನಿಲ್ದಾಣದ ಲಾಂಚ್‌ನಿಂದ ವಿಮಾನ ಸಮೀಪದವರೆಗೆ ಜತೆಯಾಗುವ ಅವಕಾಶ ದೊರೆತಿತ್ತು ಎಂದು ವಿಮಾನ ನಿಲ್ದಾಣದಲ್ಲಿ ಅಂದು ಸೂಪರ್‌ವೈಸರ್ ಆಗಿದ್ದ ಅವಧಿಯಲ್ಲಿ ಅರವಿಂದ ಅವರು ನೆನಪಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಯಾವಾಗಲು ಹೇಳುವವರು ಎಸ್.ಎಂ.ಕೃಷ್ಣ. ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ತುಂಬ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ನನ್ನನ್ನು ಕ್ಯಾಬಿನೆಟ್ ದರ್ಜೆಯ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವರಾಗಿ ಮಾಡಿದ್ದರು. ಸಂಪುಟ ಮರುರಚನೆ ಸಂದರ್ಭ ಸಾರಿಗೆ ಸಚಿವರಾಗಿ ನೇಮಕ ಮಾಡಿದ್ದರು ಎಂದು ಕೆಪಿಸಿಸಿ ಹಾಲಿ ಉಪಾಧ್ಯಕ್ಷ ಬಿ.ರಮಾನಾಥ ರೈ ಅವರು ಜ್ಞಾಪಿಸಿದ್ದಾರೆ.

ಮಂಗಳೂರು ನಗರದ ಪ್ರಥಮ ಚತುಷ್ಫಥ ಕಾಂಕ್ರೀಟ್ ರಸ್ತೆಯನ್ನು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉದ್ಘಾಟಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಹಾಲಿ ಸದಸ್ಯ ಶಶಿಧರ ಹೆಗ್ಡೆ ಅಂದು ಮೇಯರ್ ಆಗಿದ್ದರು. ದೈವಭಕ್ತರಾಗಿದ್ದ ಎಸ್.ಎಂ.ಕೃಷ್ಣ ಅವರು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.

------

ಮಂಗಳೂರು ನಗರದ ಪ್ರಥಮ ಚತುಷ್ಫಥ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭವನ್ನು ಇಲ್ಲಿ ಒದಗಿಸಲಾಗಿರುವ ಫೊಟೋ ದಲ್ಲಿ ಕಾಣಬಹುದು. ಅಂದು ಮೇಯರ್ ಆಗಿದ್ದ ಶಶಿಧರ ಹೆಗ್ಡೆ, ಮಾಜಿ ಸಚಿವ ಬಿ.ರಮಾನಾಥ ರೈ, ಸ್ಪೀಕರ್ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ವಿಜಯಕುಮಾರ್ ಶೆಟ್ಟಿ ಅವರು ಚಿತ್ರದಲ್ಲಿ ಇದ್ದಾರೆ.