ನೆಲಮಂಗಲ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವಾರು ಕುತೂಹಲಗಳು ನಡೆದಿವೆ. ಇಂದು ನಡೆಯುತ್ತಿರುವ ಮತ ಎಣಿಕೆ ವೇಳೆ ಕೆಲವು ಸ್ಥಳಗಳಲ್ಲಿ ಅಚ್ಚರಿ ಎನಿಸುವಂಥ ವಿಷಯಗಳು ನಡೆದಿವೆ. ಕೆಲವು ಕಡೆಗಳಲ್ಲಿ ಅತ್ಯಂತ ಹಾಸ್ಯದ ಸನ್ನಿವೇಶಗಳೂ ನಡೆದಿದ್ದರೆ, ಕೆಲವು ವಾರ್ಡ್ಗಳಲ್ಲಿ ದುರ್ಘಟನೆಗಳೂ ನಡೆದಿವೆ.
ಆದರೆ ತೀರಾ ಅಪರೂಪ ಎನ್ನುವಂಥ ಘಟನೆಗೆ ಸಾಕ್ಷಿಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರೆಬೊಮ್ಮನಹಳ್ಳಿಯ ಗೋವಿಂದಪುರ ಕ್ಷೇತ್ರ.
ಮತಗಟ್ಟೆ 153ರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ನಿಂತಿದ್ದರು. ಈ ಪೈಕಿ ಜಬಿಉಲ್ಲಾ ಬಾಗ್ 129 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೈಯದ್ ಅಬ್ದುಲ್ಲಾ ಎನ್ನುವವರು 95 ಮತ, ಸೈಯದ್ ಖಜರ್ ಎನ್ನುವವರು 33 ಮತ ಪಡೆದಿದ್ದಾರೆ.
ಇದರಲ್ಲೇನೂ ಅಚ್ಚರಿ ಇಲ್ಲ. ಆದರೆ ಇನ್ನೋರ್ವ ಅಭ್ಯರ್ಥಿ ಹಬೀದ್ ಉಲ್ಲಾ ಎನ್ನುವವರು ಜೀರೋ ಮತ ಪಡೆದಿದ್ದಾರೆ! ಇದರ ಅರ್ಥ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಈ ವಾರ್ಡ್ನಲ್ಲಿ 259 ಮಂದಿ ಮತದಾನ ಮಾಡಿದ್ದು, ಒಂದು ಮತ ತಿರಸ್ಕೃತಗೊಂಡಿದೆ.
ಆ ತಿರಸ್ಕೃತಗೊಂಡಿರುವ ಮತ ಹಬೀದ್ ಉಲ್ಲಾ ಅವರದ್ದೇ ಅಥವಾ ತಮ್ಮ ಮತವನ್ನು ಅವರು ತಮಗೇ ಹಾಕಿಕೊಳ್ಳಲು ಮರೆತರೆ ಎನ್ನುವುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಅವರಿಗೆ ಜೀರೋ ಮತಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.