ಜಿಲ್ಲೆ

ಲಿವಿಂಗ್​ ಟುಗೆದರ್​: ಕುಟುಂಬದ ಪರ್ಯಾಯ ವ್ಯವಸ್ಥೆಯೆ? ಸ್ವೇಚ್ಛಾ ಜೀವನವೆ?

| ಲೇಖಕ ಈರಣ್ಣಾ ಬಡಿಗೇರ​ ಅವರ ಪುಸ್ತಕದ ಸಂಕ್ಷಿಪ್ತ ಪರಿಚಯ

ಮದುವೆಯಾಗದೇ ಜೋಡಿಗಳು ಒಟ್ಟಿಗೇ ಇರುವುದು ಮಾಮೂಲು ಎನ್ನುವಂಥ ಪರಿಸ್ಥಿತಿ ಈಗ ಇದೆ. ವಿದೇಶಗಳಲ್ಲಿ ಹಲವು ದಶಕಗಳಿಂದ ರೂಢಿಯಲ್ಲಿ ಇದ್ದ ಈ ಪದ್ಧತಿ ಭಾರತಕ್ಕೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಮದುವೆಯೆಂಬುದು ಬಂಧನ ಎಂಬ ವ್ಯಾಖ್ಯಾನ ನೀಡಿ, ಮದುವೆಯಾಗದೇ ಒಟ್ಟಿಗೆ ಇದ್ದು ಬಿಡಲು ಜೋಡಿಗಳು ನಿರ್ಧರಿಸುವುದೇ ಲಿವ್​ ಇನ್​ ರಿಲೇಶನ್​. ಆದರೆ ಅತಿಯಾದರೆ ಎಲ್ಲವೂ ವಿಷ ಎನ್ನುವಂತೆ, ತನಗೆ ಸಿಕ್ಕಿರುವ ಈ ಹಕ್ಕನ್ನು  ಸ್ವೇಚ್ಛಾ ಜೀವನವನ್ನಾಗಿಸಿಕೊಂಡರೆ ಏನಾಗುತ್ತದೆ? ಅದರಲ್ಲಿಯೂ ಹೆಣ್ಣೊಬ್ಬಳ ಬದುಕು ಹೇಗೆ ಸಾಗುತ್ತದೆ? ಸಂಬಂಧಗಳು ಹೇಗೆ ಮುರಿದು ಬೀಳುತ್ತವೆ? ದಾಂಪತ್ಯವೆಂಬ ಕೊಂಡಿ ಹೇಗೆ ಕಳಚುತ್ತದೆ ಎಂಬುದನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸಿರುವ ಕೃತಿಯೇ ಲೇಖಕ ಈರಣ್ಣಾ ಬಡಿಗೇರ ಅವರ 'ಲಿವಿಂಗ್​ ಟುಗೆದರ್​'.

ಲಿವಿಂಗ್​ ಟುಗೆದರ್​ ಪರಿಕಲ್ಪನೆಯಿಂದ ಹೊರಕ್ಕೆ ಬಂದು ದಾಂಪತ್ಯದ ತಳಹದಿಯನ್ನು ಗಟ್ಟಿ ಮಾಡುವುದು ಹೇಗೆ ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ. ಮುರಿದು ಬೀಳುತ್ತಿರುವ ದಾಂಪತ್ಯ ಭಾಗ್ಯವನ್ನು ಮತ್ತೆ ಮತ್ತೆ ಎತ್ತಿ ನಿಲ್ಲಿಸಲು ಯುವಜನರು ಈ ಪುಸ್ತಕವನ್ನು ಓದಬೇಕು. ದಾಂಪತ್ಯ ಸಮಸ್ಯೆಗೆ ಉತ್ತರ, ಪರಿಹಾರ ಇದರಲ್ಲಿ ಇದೆ. ಎಲ್ಲಿ ತಪ್ಪಿದ್ದೇವೆ, ಏಕೆ ತಪ್ಪಿದ್ದೇವೆ ಎಂದು ನಮ್ಮನ್ನು ನಾವು ಅರಿತುಕೊಳ್ಳಲು ಈ  ಕೃತಿ ನೆರವಾಗುತ್ತದೆ, ಗೋಜಲಿಗೆ ಸಿಲುಕಿದವರಿಗೆ ಸ್ಪಷ್ಟ ಬೆಳಕು ಕಾಣುತ್ತದೆ.

ಲಿವಿಂಗ್‌ ಟುಗೆದರ್‌ ಎಂಬ ಹೊಸ ಪರಿಕಲ್ಪನೆಯು ಕೌಟುಂಬಿಕ ವ್ಯವಸ್ಥೆಗೆ ಪರ್ಯಾಯವಲ್ಲ, ಬದಲಿಗೆ ಇದು ಸ್ವೇಚ್ಛಾ ಜೀವನವಷ್ಟೇ ಎಂಬ ಸಂದೇಶ ಈ ಪುಸ್ತಕದಲ್ಲಿದೆ. ಮಹಿಳೆ ಪುರುಷನಿಗೆ ತಾನು ಸರಿಸಮಾನ ಎಂದು ಪ್ರತಿಪಾದಿಸುತ್ತಿದ್ದರೂ, ಪುರುಷನಂತೆ ತನಗೆ ಸಮಾನ ಹಕ್ಕು ಸಿಗಬೇಕು ಎಂದು ಹೇಳುತ್ತಿದ್ದರೂ ಸಮಾನತೆ ಮತ್ತು ಸ್ವೇಚ್ಛಾಚಾರದ ಜೀವನದ ನಡುವೆ ಇರುವ ತೆಳು ಗೆರೆ ಏನು ಎಂಬುದನ್ನು ಈ ಪುಸ್ತಕ ವಿವರಿಸಿದೆ.

ಲೇಖಕರು ಈ ಪುಸ್ತಕದಲ್ಲಿ ಎರಡು ಘಟ್ಟಗಳನ್ನು ಮಾಡಿದ್ದಾರೆ. ಮೊದಲನೆಯದ್ದು, ಸ್ವಾತಂತ್ರ್ಯ ಸಿಕ್ಕ ಸಂದರ್ಭದ ದಿನಗಳು ಹಾಗೂ ಎರಡನೆಯದ್ದು ಈಗಿನ ದಿನಗಳು. ಈ ಎರಡೂ ಕಾಲಘಟ್ಟಗಳಲ್ಲಿನ ದಾಂಪತ್ಯ ಜೀವನದ ಕುರಿತು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ.

2000-2001ರಲ್ಲಿ ಶ್ರೀ ಹರಿ ಆಶ್ರಮದಲ್ಲಿ ನಡೆದ ಸಂಸಾರ ಸುಧಾರಣಾ ಕಾರ್ಯಾಗಾರದಲ್ಲಿ ಬೋಧಕರಾಗಿದ್ದ ಲೇಖಕ ಈರಣ್ಣಾ ಬಡಿಗೇರ್​ ಅವರು ತಮಗೆ ಅಲ್ಲಿನ ಅನುಭವವೇ ಈ ಕಾದಂಬರಿ ಬರೆಯಲು ಪ್ರೇರಣೆ ಎಂದಿದ್ದಾರೆ. ಮಹಿಳೆ ಮನೆಯೊಡತಿ, ಗಂಡಸಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಸಿಗಬೇಕು, ಆದರೆ ಸ್ವೇಚ್ಛೆ ಸುಳಿಯಬಾರದು, ಕಟ್ಟುಪಾಡು ಹಾಕಿಕೊಂಡು ನಡೆದರೆ ಕುಟುಂಬ ವ್ಯವಸ್ಥೆ ಮತ್ತಷ್ಟು ಬಲವಾಗಿ, ಸ್ಥಿರವಾಗಿ ಸಾಗುತ್ತದೆ ಎನ್ನುವುದು ಲೇಖಕರ ಅಭಿಮತ.

'ಅಜ್ಜಿ, ಮೊಮ್ಮಗಳ ಮಾತುಕತೆಯಿಂದ ಆರಂಭವಾಗುವ ಈ ಕಾದಂಬರಿಯು ಅವರ ಮಧುರ ಬಾಂಧವ್ಯದ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ. ಸ್ವೇಚ್ಛಾ ಪ್ರವೃತ್ತಿಯ ವಿದೇಶದಲ್ಲಿ ಅಜ್ಜಿಯ ಆಶ್ರಯದಲ್ಲಿದ್ದು ಬೆಳೆದಿದ್ದರೂ ಮಾಧುರಿಯಲ್ಲಿಯ ಸಂಸ್ಕಾರ ನಡೆ-ನುಡಿ ಯುವ ಜನಾಂಗಕ್ಕೆ ಮಾದರಿ. ಇಲ್ಲಿ ಮಾಧುರಿಯ ಪಾತ್ರ ಓದುಗರ ಮನಸ್ಸಿನಲ್ಲಿ ಅಭಿಮಾನದ ಪ್ರತಿರೂಪವಾಗಿ ಸ್ಥಿರವಾಗಿ ಉಳಿಯುತ್ತದೆ' ಎಂದು ಮುನ್ನುಡಿ ಬರೆದಿರುವ ಬೆಂಗಳೂರಿನ ಬೃಂದಾವನ ಕಾಲೇಜ್​ ಆಫ್​ ಆರ್ಕಿಟೆಕ್ಚರ್​ನ ಸಹಾಯಕ ಪ್ರಾಧ್ಯಾಪಕರಾಗಿರುವ ರಜನಿ ಅಮರೇಶಕುಮಾರ್​ ಅಭಿಪ್ರಾಯ ಪಟ್ಟಿದ್ದಾರೆ.

ಯುವ ಜನರ ಮನೋ ನಿಗ್ರಹಕ್ಕೆ ಬೇಕಾದ ಪರಿಕರಗಳನ್ನು ಲೇಖಕರು ಈ ಕೃತಿಯಲ್ಲಿ ತುಂಬಿ ಕೊಟ್ಟಿದ್ದಾರೆ. ಓದಿ ತಮ್ಮ ದಾಂಪತ್ಯ ಬದುಕನ್ನು ತಿದ್ದಿಕೊಂಡರೆ, ಧನ್ಯತೆಯ ಬದುಕು ಖಂಡಿತ ತಮ್ಮದಾಗುತ್ತದೆ ಎನ್ನುತ್ತಾರೆ ರಜನಿ.

ಪ್ರಕಾಶಕರು: ಶ್ರೀ ಹರಿಪ್ರಕಾಶನ, 101/40, ಶ್ರೀ ಸಿದ್ದಲಿಂಗೇಶ್ವರ ಕಾಲೋನಿ, ವಿಕಾಸನಗರ, ಹುಬ್ಬಳ್ಳಿ- 580021.

ಬೆಲೆ: 250 ರೂ.

ಪುಟಗಳು: 244

ಲೇಖಕರು: ಈರಣ್ಣಾ ಬಡಿಗೇರ

ಪುಸ್ತಕ: ಲಿವಿಂಗ್​ ಟುಗೆದರ್​

ಸಂಪರ್ಕಕ್ಕೆ: 9844062244

ಡಿ.31ರಂದು ಈರಣ್ಣಾ ಬಡಿಗೇರ್​ ಅವರ ಎರಡು ಕೃತಿಗಳ ಬಿಡುಗಡೆ

ಪ್ರಾಧ್ಯಾಪಕ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಉಪನ್ಯಾಸಕರಾದ ಗಾಯತ್ರಿ ವಿ. ಹುದ್ದಾರ್​ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹತ್ತಿಮತ್ತೂರ- ಕರ್ಜಗಿ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ ನಿಜಗುಣ ಶಿವಯೋಗಿಗಳು ಸಾನಿಧ್ಯ ವಹಿಸಲಿದ್ದು, ಪ್ರಾಧ್ಯಾಪಕ ಡಾ. ಎಂ.ಎಸ್​.ಹುಲ್ಲೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ಬಿ. ನಾಯಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಮಹದೇವ ಬಿ. ಚಟ್ಟಿ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.

ಈರಣ್ಣಾ ಬಡಿಗೇರ ಅವರ 'ಲಿವಿಂಗ್​ ಟುಗೆದರ್​' ಹಾಗೂ ' ಮತ್ತೆ ಬೇರಿನ ಕಡೆಗೆ ' ಕೃತಿಗಳು ಡಿ.31ರಂದು ಹುಬ್ಬಳ್ಳಿಯ ಮಹಾರಾಷ್ಟ್ರ ಮಂಡಳಿಯ ಸಭಾಭವನ, ಕೋರ್ಟ್​ ಸರ್ಕಲ್​, ಎನ್​ಎಂಆರ್​ ಸ್ಕ್ಯಾನ್​ ಸೆಂಟರ್​ ಹತ್ತಿರ, ಕ್ಲಬ್​ ರಸ್ತೆ ಇಲ್ಲಿ ಬೆಳಗ್ಗೆ 11 ಗಂಟೆಗೆ ಬಿಡುಗಡೆಗೊಳ್ಳಲಿವೆ.