ಜಿಲ್ಲೆ

ಭಾರಿ ವಿವಾದದಲ್ಲಿ ಸಿಲುಕಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ತಲೆದಂಡ: ಅಧ್ಯಕ್ಷ ಸ್ಥಾನದಿಂದ ವಜಾ

suchetana

ಬೆಂಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಪ್ರತಿಭಟನೆಯನ್ನು ಹಣ ಪಡೆದು ಕೈಬಿಟ್ಟಿದ್ದು ಸೇರಿದಂತೆ ಕೆಲವು ಆಪಾದನೆಗಳನ್ನು ಎದುರಿಸುತ್ತಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ. ಇವರ ಸ್ಥಾನದಲ್ಲಿ ಇದೀಗ ಎಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಖಾಸಗಿ ಸುದ್ದಿ ವಾಹಿನಿಯೊಂದು ಸ್ಟಿಂಗ್​ ಆಪರೇಷನ್​ ಮಾಡಿ, ಕೋಡಿಹಳ್ಳಿ ಚಂದ್ರಶೇಖರ್ ಹಣವನ್ನು ಪಡೆದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಪ್ರತಿಭಟನೆಯನ್ನು ಕೈಬಿಟ್ಟಿದ್ದರು ಎಂಬ ಸುದ್ದಿ ಬಿತ್ತರಿಸಿತ್ತು. ಆದರೆ ಇದನ್ನು ಕೋಡಿಹಳ್ಳಿ ಅಲ್ಲಗಳೆಯಲಿಲ್ಲ. ಆರೋಪದ ಕುರಿತು ಸ್ಪಷ್ಟನೆ ನೀಡಲಿಲ್ಲ. ಇದರಿಂದಾಗಿ ಸಂಘ ಗೌರವಕ್ಕೂ ಹಾಳಾಗುತ್ತಿರುವುದನ್ನು ಗಮನಿಸಿ ಪದಾಧಿಕಾರಿಗಳು ರಾಜ್ಯ ಸಮಿತಿಯ ಸಭೆಯನ್ನು ಮಾಡಿ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ವಜಾಗೊಳಿಸಿರುವುದಾಗಿ ಹೇಳಲಾಗಿದೆ.

ಈ ವಿಚಾರವಾಗಿ ನಾವೆಲ್ಲರು ತಲೆ ತಗ್ಗಿಸುವಂತಾಗಿದೆ. ಇದು ರೈತ ಚಳವಳಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಈಗಿನ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ರವರು ತನಿಖೆ ಆಗುವವರೆಗಾದರೂ ರಾಜೀನಾಮೆ ಕೊಟ್ಟು ಸಂಘದ ಗೌರವವನ್ನು ಉಳಿಸಬೇಕಿತ್ತು. ಈ ದಿನ ಸಭೆ ಸೇರಿದ ಎಲ್ಲರೂ ಸ್ಥಾನ ತ್ಯಜಿಸಿ ಬೇರೆಯವರನ್ನು ಆಯ್ಕೆ ಮಾಡಿ ಎಂದು ಸಲಹೆಯನ್ನು ನೀಡಿದರು ಒಪ್ಪಲಿಲ್ಲ. ಈ ಕಾರಣದಿಂದಾಗಿ ಶಿವಮೊಗ್ಗದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೋಡಿಹಳ್ಳಿ ಚಂದ್ರಶೇಖರ್‌ರವರನ್ನು ಅಧ್ಯಕ್ಷ ಸ್ಥಾನದಿಂದ ವಜಗೊಳಿಸಲಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಸಂಘ ಹೇಳಿದೆ.